ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 20ಕ್ಕೂ ಹೆಚ್ಚು ಅಧಿಕ ಸ್ಥಾನವನ್ನು ಪಡೆಯಲು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರಣವಾಗಲಿದೆ- ಟಿಎಂ ಶಹೀದ್ ತೆಕ್ಕಿಲ್ …

ಸುಳ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನವನ್ನು ಕಾಂಗ್ರೆಸ್ ಪಕ್ಷ ಗೆಲ್ಲಲಿದ್ದು ಈ ಗೆಲುವಿಗೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಂಡಿರುವಂತಹ 5 ಗ್ಯಾರಂಟಿ ಯೋಜನೆಗಳು ಕಾರಣವಾಗಲಿದೆ ಎಂದು ಕೆ ಪಿ ಸಿ ಸಿ ವಕ್ತಾರ ಟಿ ಎಂ ಶಹೀದ್ ತೆಕ್ಕಿಲ್ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿ ಈ ಮೊದಲು ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ಅವಹೇಳನೆ ಮಾಡುತ್ತಿತ್ತು. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ತಮ್ಮ ಗೆಲುವಿಗಾಗಿ ಗ್ಯಾರೆಂಟಿಯ ಮೊರೆ ಹೋಗಿದ್ದಾರೆ ಎಂದು ಅವರು ಟೀಕಿಸಿದರು. ಬಿಜೆಪಿಯವರಿಗೆ ಧರ್ಮ ಧರ್ಮಗಳ ನಡುವೆ ಸಂಘರ್ಷವನ್ನು ಮಾಡಿಸುವುದು ಬಿಟ್ಟು ಬೇರೆ ಏನು ಮಾಡಲಿಲ್ಲ. ಅವರಿಗೆ ಅಭಿವೃದ್ಧಿ, ಜನ ಸೇವೆ ಗೊತ್ತಿಲ್ಲ. ಈ ಪರಿಸ್ಥಿತಿಯಿಂದಲೇ ಇಂದು ಅವರ ಅನೇಕ ಮಂದಿ ನಾಯಕರುಗಳು ಚುನಾವಣೆಗೆ ನಿಲ್ಲಲು ಅವಕಾಶವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯ ಪ್ರಮುಖ ನಾಯಕರುಗಳಾದ ಪ್ರತಾಪ ಸಿಂಹ,ಸಿ ಟಿ ರವಿ,ಅನಂತ್ ಕುಮಾರ್ ಹೆಗ್ಡೆ,ಈಶ್ವರಪ್ಪ, ಡಿ ವಿ ಸದಾನಂದ ಗೌಡ ಸೇರಿದಂತೆ ಇನ್ನೂ ಹಲವಾರು ಪ್ರಮುಖರಿಗೆ ಟಿಕೆಟ್ ನಿರಾಕರಣೆ ಮಾಡಿ ಬಿಜೆಪಿಯಲ್ಲಿ ತಳಮಳವನ್ನು ಸೃಷ್ಟಿಸಿದ್ದಾರೆ. ಇದೀಗ ಬಿಜೆಪಿ ಒಡೆದ ಮನೆಯಾಗಿದ್ದು ಇದರೊಂದಿಗೆ ಸೇರಿಕೊಂಡಿರುವ ಜೆಡಿಎಸ್ ಪಕ್ಷವು ಕೂಡ ಈ ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಕುಟುಂಬಸ್ಥರ ಹಿತಾಸಕ್ತಿಯ ಜೆ ಡಿ ಎಸ್ ಪಕ್ಷ ಈಗ ಅಯೋಮಯ ಪರಿಸ್ಥಿತಿಯಲ್ಲಿದೆ ಎಂದು ಅವರು ವ್ಯಂಗ್ಯವಾಡಿದರು.
ಎಲ್ಲಾ ರೀತಿಯ ಭ್ರಷ್ಟಾಚಾರದಲ್ಲಿ ಮುಳುಗಿರುವ ಕೇಂದ್ರ ಬಿಜೆಪಿ ಸರ್ಕಾರವು ಚುನಾವಣಾ ಬಾಂಡ್ ಮೂಲಕ ಲೂಟಿ ಹೊಡೆದಿರುವ ಪ್ರಕರಣಗಳು, ಗೋಮಾಂಸ ರಫ್ತುದಾರರು ಮತ್ತು ಬ್ಲಾಕ್ ಲಿಸ್ಟ್ ನಲ್ಲಿರುವ ಔಷದಿ ಕಂಪನಿಗಳು ನೀಡಿರುವಂತಹ ಸಾವಿರಾರು ಕೋಟಿ ಹಣದ ಲೆಕ್ಕಗಳು ಇವೆಲ್ಲವೂ ಮುಳ್ಳಾಗಿ ಇಂದು ಬಿಜೆಪಿಗೆ ಚುಚ್ಚುತ್ತಿದೆ. ಯಾವುದೇ ಕಾರಣಕ್ಕೂ ಈ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತವನ್ನು ಹಿಡಿಯುವುದು ಸಾಧ್ಯವಿಲ್ಲ. ದೇಶದಲ್ಲಿ ಇಂಡಿಯಾ ಮೈತ್ರಿ ಜಯಿಸಲಿದ್ದು ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ನೀಡಿರುವಂತಹ ಏಳು ಗ್ಯಾರಂಟಿ ಯೋಜನೆಗಳು ಫಲಪ್ರದವಾಗಲಿದೆ. ದೇಶದಲ್ಲಿ ಬಿಜೆಪಿ ವಿರೋಧಿ ಗಾಳಿ ಬೀಸುತ್ತಿದ್ದು 2 ಕೋಟಿ ಉದ್ಯೋಗ, 15 ಲಕ್ಷ ಹಣ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.
ಹಿಜಾಬ್, ಹಲಾಲ್, ಅಜಾನ್ ಎಂಬಿತ್ಯಾದಿ ವಿಷಯಗಳನ್ನು ಹೇಳಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸೋತು ಸುಣ್ಣವಾದ ಬಿಜೆಪಿ ಪಕ್ಷ ಈ ಬಾರಿ ಕೇಂದ್ರದಲ್ಲಿಯೂ ಕೂಡ ಅಧಿಕಾರವನ್ನು ಕಳೆದುಕೊಳ್ಳಲಿದೆ ಎಂದು ಟಿ ಎಂ ಶಹೀದ್ ಭವಿಷ್ಯ ನುಡಿದರು.
ಅರೆ ಭಾಷೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಸರಕಾರದ ಎಲ್ಲಾ ನಾಮನಿರ್ದೇಶನ ಪ್ರತಿನಿಧಿಗಳಿಗೆ ಅಭಿನಂದನೆಯನ್ನೂ ಅವರು ಈ ಸಂದರ್ಭದಲ್ಲಿ ಸಲ್ಲಿಸಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸಿದ್ದೀಕ್ ಕೊಕ್ಕೋ, ಗ್ಯಾರೆಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ ಮುಖಂಡ ಹನೀಫ್ ಬೀಜದಕೊಚ್ಚಿ ಉಪಸ್ಥಿತರಿದ್ದರು.

Sponsors

Related Articles

Back to top button