ರಸ್ತೆಯಲ್ಲಿ ನಮಾಜ್ ಪ್ರಕರಣ – ಪೊಲೀಸ್ ನಡವಳಿಕೆಯ ಬಗ್ಗೆ ಟಿ.ಎಂ ಶಹೀದ್ ತೆಕ್ಕಿಲ್ ಖಂಡನೆ…
ಸುಳ್ಯ: ಮಂಗಳೂರಿನ ಕಂಕನಾಡಿ ಮಸೀದಿಯಲ್ಲಿ ನಮಾಜ್ ಗೆ ಸ್ಥಳಾವಕಾಶದ ಕೊರತೆಯಿಂದ ರಸ್ತೆಯಲ್ಲಿ ನಮಾಜ್ ಮಾಡಿದರು ಎಂಬ ಕಾರಣಕ್ಕೆ ನಮಾಜ್ ಮಾಡಿದವರ ವಿರುದ್ಧ ಸುಮೊಟೊ ಕೇಸು ದಾಖಲಿಸಿದ ಪೋಲೀಸ್ ಇಲಾಖೆಯ ಕ್ರಮವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಖಂಡಿಸಿದ್ದಾರೆ.
ಈ ಘಟನೆಯ ಬಗ್ಗೆ ಸುಮೊಟೊ ಕೇಸ್ ಮಾಡುವ ಅಗತ್ಯವೇ ಇರಲಿಲ್ಲ. ಈ ಹಿಂದೆ ಮಂಗಳೂರಿನ ನಡು ರಸ್ತೆಯಲ್ಲಿ ಪೂಜೆ ಪುರಸ್ಕಾರ, ರಾಜಕೀಯ ಸಮ್ಮೇಳನದಂತಹ ವಿವಿಧ ಕಾರ್ಯಕ್ರಮಗಳು ಮಾಡಿದಾಗ ಪೋಲಿಸರು ಯಾವ ಕೇಸನ್ನು ದಾಖಲಿಸಲಿಲ್ಲ. ಪೋಲಿಸರು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪೋಲೀಸ್ ಸ್ಟೇಶನ್ ಗೆ ನುಗ್ಗಿ ಪೋಲಿಸರಿಗೆ ಬೆದರಿಕೆ ಹಾಕಿ ಗೂಂಡಾಗಿರಿ ಮಾಡಿದ್ದರು. ಅವರ ಮೇಲೆ ಕೇಸ್ ಹಾಕಲು ಮೀನಾ ಮೇಷ ಎಣಿಸುತ್ತಿದ್ದರು. ಅವರನ್ನು ಬಂಧಿಸಲು ಹೋದಾಗ ಪ್ರತಿಭಟನೆ ಮತ್ತು ರಸ್ತೆ ತಡೆ ಮಾಡಿದ್ದರು. ಅವರ ಮೇಲೆ ಸಮೋಟೊ ಕೇಸ್ ಹಾಕಲಿಲ್ಲ ಈ ಪ್ರಕರಣವು ಆರ್ ಎಸ್ ಎಸ್ ನವರ ಷಡ್ಯಂತರದಿಂದ ಮತ್ತು ಮಾಧ್ಯಮದವರ ರಾಜಕೀಯದಿಂದ ಸೃಷ್ಠಿಯಾದ ಪ್ರಕರಣವಾಗಿದೆ. ಪೊಲೀಸ್ ಇಲಾಖೆ ಆರ್ ಎಸ್ ಎಸ್, ಬಿ.ಜೆ.ಪಿ.ಯವರ ಅಣತಿಯಂತೆ ಕೆಲಸ ಮಾಡುತ್ತಿರುವುದು ಖಂಡನೀಯ. ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಇದು ಇಲಾಖೆಯ ದ್ವಿಮುಖ ನೀತಿಯಾಗಿದೆ. ಮುಂದೆ ಯಾವ ಧರ್ಮದವರಿಗೂ ರಸ್ತೆಯಲ್ಲಿ ಧಾರ್ಮಿಕ ಚಟುವಟಿಕೆಯನ್ನು ನಡೆಸಲು ಅವಕಾಶ ನೀಡಬಾರದು. ನಮಾಜ್ ಮಾಡಿದವರ ಮೇಲೆ ಹಾಕಿದ ಕೇಸನ್ನು ಕೂಡಲೇ ಹಿಂಪಡೆಯಬೇಕೆಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ಅಲ್ಲದೆ ಆರ್ ಎಸ್ ಎಸ್, ಸಂಘ ಪರಿವಾರ, ಕೆಲವು ಮಾಧ್ಯಮಗಳು ಮತ್ತು ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಮುಸ್ಲಿಂ ವಿರೋಧಿ ನೀತಿಯಿಂದ ಸಮಸ್ಯೆ ಆಗುತ್ತಿದ್ದು, ಕೇವಲ ಮುಸಲ್ಮಾನರ ತಪ್ಪನ್ನು ವ್ಯಾಪಾಕ ಪ್ರಚಾರ ಮಾಡಿರುವುದು ಸ್ಪಷ್ಟ. ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು, 3 ವರ್ಷ ಪೋರೈಸಿದ ಸಿಬ್ಬಂದಿಗಳನ್ನು ಬೇರೆ ಜಿಲ್ಲೆಗೆ ವರ್ಗ ಮಾಡುವಂತೆ ಅವರು ಆಗ್ರಹಿಸಿದರು. ಜಿಲ್ಲೆಯಲ್ಲಿ ವ್ಯಾಪಕ ದಂಧೆಗಳು ನಡೆಯುತ್ತಿದ್ದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ, ಸ್ವಜನ ಪಕ್ಷಪಾತದಲ್ಲಿ ಮುಳುಗಿದ್ದು, ಜಿಲ್ಲೆಯಿಂದ ಸಾಮೂಹಿಕ ವರ್ಗಾವಣೆ ಅತೀ ಅಗತ್ಯ. ಇಲ್ಲದಿದ್ದಲ್ಲಿ ಈ ಬಗ್ಗೆ ಸಮಾನ ಮನಸ್ಕರ ಜೊತೆ ಸೇರಿ ಹೋರಾಟ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಡಿ ಜಿ ಪಿ ಅಲೋಕ್ ಮೋಹನ್ ಅವರಿಗೆ ಪತ್ರ ಮೂಲಕ ಅವರು ತಿಳಿಸಿದ್ದಾರೆ.