ವಿದ್ಯುತ್ ಸಮಸ್ಯೆಯಿಂದ ನಗರಸಭೆಗೆ ನೀರಿನ ಸಮಸ್ಯೆ-ವಾರದೊಳಗೆ ಪರಿಹರಿಸದಿದ್ದಲ್ಲಿ ಪ್ರತಿಭಟನೆ, ಸದಸ್ಯರ ಎಚ್ಚರಿಕೆ…
ಪುತ್ತೂರು: ವಿದ್ಯುತ್ ಸಮಸ್ಯೆಯಿಂದಾಗಿ ಕಳೆದ ಒಂದು ವಾರದಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಆಗುತ್ತಿರುವ ನೆಕ್ಕಿಲಾಡಿ ಪಂಪ್ ಹೌಸ್‌ನಿಂದ ನೀರು ಸರಬರಾಜು ಆಗದೆ ನಗರವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಈ ಕುರಿತು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆ ಸದಸ್ಯರಿಂದ ಪುತ್ತೂರು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪುತ್ತೂರು ನಗರಸಭೆ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ನಗರಸಭಾ ಸದಸ್ಯರು ಸೋಮವಾರ ಪೌರಾಯುಕ್ತೆ ರೂಪಾ ಶೆಟ್ಟಿ ಅವರಿಗೆ ನಗರದ ಕುಡಿಯುವ ನೀರಿನ ಸಮಸ್ಯೆಯ ಕುರಿತು ಮನವಿ ಸಲ್ಲಿಸಿದರು. ನಗರಸಭೆ ವ್ಯಾಪ್ತಿಗೆ ನೆಕ್ಕಿಲಾಡಿಯಿಂದ ಬರುತ್ತಿರುವ ಕುಡಿಯುವ ನೀರಿನ ಘಟಕದ ಮೂಲಸ್ಥಾವರಕ್ಕೆ ನಿರಂತರ ವಿದ್ಯುತ್ ನೀಡುವ ಸೌಲಭ್ಯವಿದ್ದರೂ ದಿನಪ್ರತಿ ಆಗಾಗ ವಿದ್ಯುತ್ ತೆಗೆಯುವುದರಿಂದ ಪುತ್ತೂರು ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕುರಿತು ಹಲವಾರು ಬಾರಿ ಹಲವಾರು ಬಾರಿ ನಗರಸಭೆಗೆ ತಿಳಿಸಲಾಗಿದೆ. ಮುಂದೆ ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ ಗಮನಕ್ಕೆ ಇದನ್ನು ತರುವಂತೆ ಮತ್ತು ವಾರದೊಳಗೆ ಕುಡಿಯುವ ನೀರಿಗೆ ಸಮರ್ಪಕ ವ್ಯವಸ್ಥೆ ಮಾಡದೇ ಇದ್ದಲ್ಲಿ ಪುತ್ತೂರು ಮೆಸ್ಕಾಂ ಎದುರು ಧರಣಿ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಭಾಮಿ ಅಶೋಕ್ ಶೆಣೈ, ಜೀವಂಧರ್ ಜೈನ್, ಪಿ.ಜಿ.ಜಗನ್ನಿವಾಸ ರಾವ್, ಶಿವರಾಮ ಸಪಲ್ಯ, ಸುಂದರ ಪೂಜಾರಿ ಬಡಾವು, ಪದ್ಮನಾಭ ನಾಯಕ್, ವಸಂತ ಕಾರೆಕ್ಕಾಡು, ವಿದ್ಯಾ ಗೌರಿ, ಗೌರಿ ಬನ್ನೂರು, ಪ್ರೇಮಲತಾ ನಂದಿಲ, ಮಮತಾ ರಂಜನ್, ಮೋಹಿನಿ ವಿಶ್ವನಾಥ ಗೌಡ, ಸಂತೋಷ್ ಬೊಳುವಾರು ಉಪಸ್ಥಿತರಿದ್ದರು.
ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್, ನೀರಿನ ವಿಭಾಗದ ವಸಂತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.