98ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ…
ಬಂಟ್ವಾಳ:ಸುಭಾಷ್ ಯುವಕ ಮಂಡಲ(ರಿ), ಶ್ರೀ ಶಾರದಾ ಪೂಜಾ ಸೇವಾ ಸಮಿತಿ ಸುಭಾಷ್ ನಗರ ಸಜಿಪ ಮೂಡ ಇವುಗಳ ಸಂಯುಕ್ತ ಆಶ್ರಯದಲ್ಲಿ 98ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಭಾಷ್ ನಗರ ವಠಾರದಲ್ಲಿ ಜರಗಿತು.
ಪ್ರಥಮ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವಹಿಸಿ, ಕಲಿಯುಗದಲ್ಲಿ ಸಾಮೂಹಿಕವಾಗಿ ಧರ್ಮ ಆಚರಣೆಯನ್ನು ಮಾಡುವುದರಿಂದ ದೇವತಾ ಅನುಗ್ರಹ ಪ್ರಾಪ್ತಿಯಾಗುವುದು. ಸನಾತನ ಧರ್ಮದಲ್ಲಿ ಶರನ್ನವರಾತ್ರಿಯ ಶಾರದ ಪೂಜೆಗೆ ವಿಶೇಷ ಮಹತ್ವವಿದ್ದು ಶಾರದಾ ಪೂಜಾ ಸಮಿತಿ ಆಶಯದಂತೆ ಶತಮಾನೋತ್ಸವ ವರ್ಷಪೂರ್ತಿ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳು ದೇವರ ದಯದಿಂದ ನಡೆಯುವಂತಾಗಲಿ ಎಂಬುದಾಗಿ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯನಿ ವತ್ಸಲ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್ ಶ್ರೀನಾಥ್ ಶೆಟ್ಟಿ, ಯೋಗೀಶ್ ಬೆಲ್ಚಾಡ, ಶಾರದಾ ಪೂಜಾ ಸಮಿತಿ ಅಧ್ಯಕ್ಷ ಕಿಶೋರ್, ಮಹಿಳಾ ಸಮಿತಿ ಅಧ್ಯಕ್ಷ ಪುಷ್ಪ ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಗಿರೀಶ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.