ಧೀಮಂತ ಉದ್ಯಮಿ ರತನ್ ಟಾಟಾ ಇನ್ನಿಲ್ಲ…
ಮುಂಬೈ: ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಬೃಹತ್ ಉದ್ಯಮಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬುಧವಾರ ರಾತ್ರಿ ನಿಧನರಾದರು.
ದೇಶದ ಕಂಡ ಅಪ್ರತಿಮ, ಧೀಮಂತ ಉದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದೆ.
1937ರಲ್ಲಿ ಜನಿಸಿದ ರತನ್ ಟಾಟಾ ತಮ್ಮ ಪೋಷಕರು 1948ರಲ್ಲಿ ಬೇರೆ ಬೇರೆಯಾದ ಬಳಿಕ ಅಜ್ಜಿ ನವಾಜ್‌ಭಾಯಿ ಟಾಟಾ ಅವರ ಜೊತೆಯಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದರು. ಕಾರ್ನೆಲ್ ವಿವಿಯಿಂದ ವಾಸ್ತುಶಿಲ್ಪ ಪದವಿ ಪಡೆದಿದ್ದ ಅವರು, ಮುಂದೆ ಹಾರ್ವರ್ಡ್ ವಿವಿಯಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಪೂರ್ಣಗೊಳಿಸಿದ್ದರು.
ತಮ್ಮ ಮುತ್ತಜ್ಜ ಜಮ್ಶೆಡ್‌ಜೀ ಟಾಟಾ ಸ್ಥಾಪಿಸಿದ್ದ ಟಾಟಾ ಗ್ರೂಪ್‌ನ ಜವಾಬ್ದಾರಿಯನ್ನು ರತನ್ ಟಾಟಾ ಅವರು 1991ರಲ್ಲಿ ವಹಿಸಿಕೊಂಡಿದ್ದರು. ಸುಮಾರು 100 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆಯನ್ನು ಅವರು 2012ರವರೆಗೆ ಸಮರ್ಥವಾಗಿ ಮುನ್ನಡೆಸಿದ್ದರು.
1991 ರಿಂದ ಆರಂಭಗೊಂಡು ಎರಡು ದಶಕಗಳಿಗೂ ಹೆಚ್ಚು ಕಾಲ ಅಧ್ಯಕ್ಷರಾಗಿ ಟಾಟಾ ಎಂಬ 156 ವರ್ಷಗಳಷ್ಟು ಹಳೆಯದಾದ ಉದ್ಯಮ ಸಂಸ್ಥೆಯನ್ನು ವೇಗವಾಗಿ ವಿಸ್ತರಿಸಿದರು. ಇದು ಈಗ 100 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ ಮತ್ತು ಮಾರ್ಚ್ 2024 ರ ವೇಳೆಗೆ ಸುಮಾರು $165 ಶತಕೋಟಿ ಆದಾಯವನ್ನು ಗಳಿಸಿದೆ. 24ಕ್ಕೂ ಅಧಿಕ ಅಂಗ ಸಂಸ್ಥೆಗಳನ್ನು ಒಳಗೊಂಡಿರುವ, ಟಾಟಾ ಗ್ರೂಪ್ ಕಾಫಿ ಮತ್ತು ಕಾರುಗಳಿಂದ ಹಿಡಿದು ಉಪ್ಪು ಮತ್ತು ಸಾಫ್ಟ್‌ವೇರ್‌ವರೆಗೆ ಉತ್ಪನ್ನಗಳನ್ನು ತಯಾರಿಸುತ್ತದೆ, ಏರ್‌ಲೈನ್‌ಗಳನ್ನು ನಡೆಸುತ್ತದೆ.