ರಾಮನ ಆದರ್ಶ ಸರ್ವಕಾಲಿಕ: ರಾಘವೇಶ್ವರ ಶ್ರೀ…

ಗೋಕರ್ಣ: ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ ಕೈಗೊಳ್ಳುವ ಶ್ರೀರಾಮ ಪಟ್ಟಾಭಿಷೇಕ ಇಂದಿಗೂ ಪ್ರಸ್ತುತ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 19ನೇ ದಿನವಾದ ಸೋಮವಾರ ಬಾಲಚಂದ್ರ ಭಟ್ ಮತ್ತು ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಶ್ರೀರಾಮನ ಆದರ್ಶ ಸಾರ್ವಕಾಲಿಕ ಸತ್ಯ. ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ ರಾಮರಾಜ್ಯ ಸ್ಥಾಪನೆಯ ಆರಂಭಿಕ ಘಟ್ಟ. ಪ್ರತಿಯೊಬ್ಬರ ಜೀವನಕ್ಕೆ ರಾಮರಕ್ಷೆ ಅಗತ್ಯ. ರಾಮನಿಗೆ ನಾವು ಸಮರ್ಪಿಸಿಕೊಂಡಾಗ ಮಾತ್ರ ಅದು ಲಭ್ಯವಾಗುತ್ತದೆ ಎಂದು ಬಣ್ಣಿಸಿದರು.
ನಮ್ಮ ಜೀವನವೂ ರಾಮನ ದಯೆ; ಸೇವಾವಕಾಶ, ಸಂಪತ್ತು ಎಲ್ಲವೂ ಆತನ ಭಿಕ್ಷೆ ಎಂಬ ಭಾವದಿಂದ ಎಲ್ಲರನ್ನೂ ರಾಮನನ್ನು ಕಾಣುವಂತಾದಾಗ ನಿಜ ರಾಮರಾಜ್ಯ ಸ್ಥಾಪನೆಯಾಗುತ್ತದೆ ಎಂದರು.
ಎರಡು ದಿನಗಳಿಂದ ಸಾಮವೇದ ಪಾರಾಯಣ ಕೈಗೊಂಡ ಸಾಮವೇದ ಮಂಡಲ ಅಧ್ಯಕ್ಷ ಮಂಜುನಾಥ ಶ್ರೌತಿ ಅವರನ್ನು ಸನ್ಮಾನಿಸಿದ ಶ್ರೀಗಳು, “ಒಂದು ಕಾಲದಲ್ಲಿ ಸಾಮವೇದಕ್ಕೆ ಸಹಸ್ರ ಶಾಖೆಗಳಿದ್ದವು, ಆದರೆ ಇಂದು ಈ ಅಪೂರ್ವ ಸಂಪತ್ತು ವಿನಾಶದ ಅಂಚಿನಲ್ಲಿದ್ದು, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೌತಿಯವರ ಸೇವೆ ಅಮೋಘ” ಎಂದು ಬಣ್ಣಿಸಿದರು.
ಸ್ವಭಾಷಾ ಚಾತುಮಾಸ್ಯದ ಅಂಗವಾಗಿ ದಿನಕ್ಕೊಂದು ಕನ್ನಡ ಪದ ಪ್ರಚುರಪಡಿಸುವ ಸರಣಿಯಲ್ಲಿ ಶ್ರೀಗಳು ಸೋಮವಾರ ಜನಬಳಕೆಯಲ್ಲಿರುವ ‘ಅರ್ಜೆಂಟ್’ ಪದಕ್ಕೆ ತಿಲಾಂಜಲಿ ನೀಡಿ ಪರ್ಯಾಯವಾದ ತಾಪಡ್- ತೋಪಡ್, ವೇಗ, ತಕ್ಷಣ, ಅರೆಕ್ಷಣ, ಹೀಗಿಂದೀಗ, ಪಕ್ಕ, ಆತುರ, ಅವಸರ, ಈಗಿಂದೀಗ ಎಂಬ ಪದಗಳನ್ನು ಬಳಸಬಹುದು ಎಂದು ಸಲಹೆ ಮಾಡಿದರು. ಯಾವುದೇ ಶಬ್ದದ ಕೇಳುವಿಕೆಯೇ ಅದರ ಅರ್ಥವನ್ನು ಸ್ಫುರಿಸುವಂತಿರಬೇಕು. ಇಂಥ ಹಲವು ಅದ್ಭುತ ಪದಗಳು ನಮ್ಮ ಕನ್ನಡ ಭಾಷೆಯಲ್ಲಿದ್ದು, ಅದನ್ನು ಉಳಿಸಿಕೊಳ್ಳೋಣ ಎಂದು ಕಿವಿಮಾತು ಹೇಳಿದರು.
ಉತ್ತರ ಕನ್ನಡ, ಧಾರವಾಡ, ಗದಗ ಹಾಲು ಒಕ್ಕೂಟದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಗುನಗ, ಹರಿಕಾಂತ ಮತ್ತು ಖಾರ್ವಿ ಸಮುದಾಯಗಳಿಂದ ಸೋಮವಾರ ಸುವರ್ಣಪಾದುಕೆ ಸೇವೆ ನೆರವೇರಿತು. ಗುನಗ ಸಮಾಜದ ಮುಖಂಡರಾದ ರಾಜೇಶ್ ಗುನಗ ಕೆಕ್ಕಾರು, ಹರೀಶ್ ಗುನಗ ವಾಲಗಳ್ಳಿ, ರಾಮಚಂದ್ರ ಗುನಗ, ಹರಿಕಾಂತ ಸಮುದಾಯದ ಪ್ರಮುಖರಾದ ವಾಮನಿ ಹರಿಕಂತ್ರ ಹೊಲನಗದ್ದೆ, ವೀರಪ್ಪ ಹರಿಕಂತ್ರ ಕಡ್ಲೆ, ಶ್ರೀಧರ ಹರಿಕಂತ್ರ ಕೀಮಾನಿ, ಮರವಂತೆ ಖಾರ್ವಿ ಸಮಾಜದ ಮುಖಂಡರಾದ ಸುರೇಶ್ ಖಾರ್ವಿ, ಚಂದ್ರು ಖಾರ್ವಿ, ವಾಸುದೇವ ಖಾರ್ವಿ ಉಪಸ್ಥಿತರಿದ್ದರು.
ಚಾತುರ್ಮಾಸ್ಯ ತಂಡದ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ್ ಪಂಡಿತ್, ಸಮಾಜಗಳ ಸಂಯೋಜಕ ಕೆ.ಎನ್.ಹೆಗಡೆ, ಪಿಆರ್‍ಓ ಎಂ.ಎನ್.ಮಹೇಶ್ ಭಟ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ದಿನೇಶ, ಸುಚೇತನ ಶಾಸ್ತ್ರಿಗಳು, ಸುಬ್ರಾಯ ಅಹ್ನಿಹೋತ್ರಿ, ವಿನಾಯಕ ಶಾಸ್ತ್ರಿ ಮತ್ತಿತರರು ಹಾಜರಿದ್ದರು.