ಸಾಹಿತಿ ಡಾ ಚಂದ್ರಶೇಖರ ಕಂಬಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ….
ಬಂಟ್ವಾಳ: ಸಾಹಿತಿ, ನಾಟಕಕಾರರಾದ ಡಾ ಚಂದ್ರಶೇಖರ ಕಂಬಾರರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿನ ಶಿಕ್ಷಣದ ಗುಣಮಟ್ಟ ನೋಡಿ ನಮ್ಮ ದೇಶದ ಬಗ್ಗೆ ಹೊಸ ಭರವಸೆ ಮೂಡಿದೆ. ಪ್ರಪಂಚವಿಡೀ ಸುತ್ತಿದ್ದರೂ, ಇಡೀ ಪ್ರಪಂಚಕ್ಕೆ ಕತೆಯನ್ನು ತಿಳಿಸಿದವರು ಭಾರತೀಯರು. ನಾವು ಕತೆಪುಸ್ತಕವನ್ನು ಓದುವುದು, ಪ್ರಪಂಚಕ್ಕೆ ಕತೆ ಹೇೀಳುವುದನ್ನು ಕಲಿಸಿದವರು. 1600 ಭಾಷೆಗಳು, 6400 ಜಾತಿ, 34 ಕೋಟಿ ದೇವತೆಗಳು ಎಲ್ಲವೂ ಇದ್ದರೂ ಹತ್ತು ಸಾವಿರ ವರ್ಷಗಳ ಹಿಂದಿನ ಐತಿಹ್ಯವನ್ನು ಹೊಂದಿದೆ. ದುರ್ದೈವ ಎಂದರೆ ಭಾರತೀಯ ಸಂಸ್ಕ್ರತಿಯನ್ನು ಆಂಗ್ಲ ಮಾಧ್ಯಮ ಶಿಕ್ಷಣವು ನಾಶಗೊಳಿಸುತ್ತಿದೆ. ಇಂತಹ ಕನ್ನಡ ಮಾಧ್ಯಮ ಶಾಲೆಯನ್ನು ಇದೇ ಮೊದಲು ನೋಡಿರುತ್ತೇನೆ. ನಾವು ಕತೆ ಮೂಲಕ ಶಿಕ್ಷಣವನ್ನು ನೀಡುತ್ತೇವೆ. ಇಂಗ್ಲೀಷ್ ಭಾಷೆಯಲ್ಲಿ ಕತೆಯನ್ನು 20 ಸಲ ವಿವರಿಸಿದರೂ ಮಕ್ಕಳ ಮನಸ್ಸಿಗೆ ನಾಟುವುದಿಲ್ಲ. ಆದರೆ ಕನ್ನಡ ಭಾಷೆಯಲ್ಲಿ ಒಂದು ಬಾರಿ ಹೇಳಿದರೆ ಸಾಕು, ಅವರು ಅದನ್ನು ನಮಗೆ ಆ ಮೇಲೆ ಸರಿಯಾಗಿ ಕತೆ ಹೇಳುತ್ತಾರೆ. ಪ್ರಯೋಗದ ಮೂಲಕ ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ಕಾಣುವಂತಹ ಶಿಕ್ಷಣ ಬೇಕು.ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ ಆಗಬೇಕು. ಸಂಸ್ಕ್ರತದಲ್ಲಿ ಈ ವ್ಯಕ್ತಿತ್ವ ಮತ್ತು ಸಂಸ್ಕಾರಗಳ ವಿಕಸನವಾಗುತ್ತದೆ ಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ| ಪ್ರಭಾಕರ ಭಟ್ ಕಲ್ಲಡ್ಕ, ಸದಾನಂದ ನಾವರ, ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಕಮಲಾ ಪ್ರ.ಭಟ್ ಉಪಸ್ಥಿತರಿದ್ದರು.