ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ…
ಪುತ್ತೂರು: ಕಲಿತು ಹೊರಬಂದ ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಯೂ ಆ ವಿದ್ಯಾ ಸಂಸ್ಥೆಯ ರಾಯಭಾರಿಯಾಗುವುದರ ಜತೆಯಲ್ಲಿ ಅಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಸಂಸ್ಥೆಯ ಬೆಳವಣಿಗೆಗೆ ಸಹಾಯಕರಾಗಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ಏ. 27 ರಂದು ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆಯಲ್ಲಿ ಕಲಿಯುವ ಕಿರಿಯ ವಿದ್ಯಾರ್ಥಿಗಳ ಹಿತಕ್ಕಾಗಿ ಕ್ಯಾಂಪಸ್ ನೇಮಕಾತಿ ಹಾಗೂ ತಂತ್ರಜ್ಞಾನ ವಿನಿಮಯ ಕಾರ್ಯಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಸಹಕಾರಿಗಳಾಗಬೇಕು ಎಂದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನರಸಿಂಹ ಪೈ ಮಾತನಾಡಿ ಇದುವರೆಗೆ ಕಲಿತು ಹೊರಹೋದ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲಿಯೇ ದೊಡ್ಡ ಮಟ್ಟದ ಸಹಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಎಂಐಟಿ ಮಣಿಪಾಲದಲ್ಲಿ ಅಸೋಸಿಯೇಟೆಡ್ ಪ್ರೊಫೆಸರ್ ಆಗಿರುವ ಡಾ.ರಾಮಕೃಷ್ಣ.ಎಂ ಕಾಲೇಜು ಜೀವನದ ನೆನಪನ್ನು ಮೆಲುಕು ಹಾಕಿದರು. ಹಿರಿಯ ವಿದ್ಯಾರ್ಥಿ ಸಮ್ಮಿಲನವು ಒಂದು ಅವಿಭಾಜ್ಯ ಕಾರ್ಯಕ್ರಮವಾಗಬೇಕು ಇದರಲ್ಲಿ ಎಲ್ಲ ಹಿರಿಯ ವಿದ್ಯಾರ್ಥಿಗಳೂ ಭಾಗವಹಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಪ್ರೊ.ನವೀನ್‍ಕೃಷ್ಣ ವಂದಿಸಿದರು.