ಬಾಂಬ್ ಪತ್ತೆ ಪ್ರಕರಣ – ಬಿಜೆಪಿ ನಾಯಕರ ಕ್ಷಮೆಗೆ ಮಿಥುನ್ ರೈ ಒತ್ತಾಯ…..
ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಶಿ, ರೇಣುಕಾಚಾರ್ಯ, ಈಶ್ವರಪ್ಪ ಮತ್ತು ಬಸವರಾಜ್ ಬೊಮ್ಮಯಿ ತಕ್ಷಣ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಒತ್ತಾಯಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಮುಖಂಡರ ಹೇಳಿಕೆಗಳಿಂದಾಗಿ ಕೋಮು ದೌರ್ಜನ್ಯ, ಶಾಂತಿ ಮತ್ತು ಸೌಹಾರ್ದತೆಗೆ ಭಂಗ ಉಂಟಾಗುವ ಸಾಧ್ಯತೆ ಇತ್ತು, ಹೀಗಾಗಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕಾಗಿದೆ. ಬಾಂಬ್ ಪತ್ತೆಯಾದ ವೇಳೆ ಎಲ್ಲರೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದರು. ಅಪರಾಧಿಗೆ ಯಾವುದೇ ಜಾತಿ ಧರ್ಮವಿಲ್ಲ. ಮಂಗಳೂರು ಒಳ್ಳೆಯ ಸುದ್ದಿಗಳಿಂದ ಪ್ರಸಿದ್ಧವಾಗಬೇಕು ಹೊರತು ಕೆಟ್ಟ ಕಾರಣಗಳಿಗಾಗಿ ಅಲ್ಲ ಎಂದರು.
ಗೋಲಿಬಾರ್ ಮತ್ತು ಬಾಂಬ್ ಪತ್ತೆ ಘಟನೆಯಿಂದಾಗಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತಿದ್ದು ನಾವು 10 ವರ್ಷಗಳ ಹಿಂದಕ್ಕೆ ಹೋಗುತ್ತಿದ್ದೇವೆ. ಮಂಗಳೂರು ಕೋಮು ದೌರ್ಜನ್ಯದ ಪ್ರಯೋಗಾಲಯವಾಗುತ್ತಿದ್ದು, ಬಹುರಾಷ್ಟ್ರೀಯ ಕಂಪನಿಗಳು ಮಂಗಳೂರಿನಲ್ಲಿ ಹೂಡಿಕೆ ಮಾಡಲು ತಯಾರಿಲ್ಲ. ಹೀಗಾಗಿ ಇಂತಹ ಘಟನೆಗಳನ್ನು ಜಿಲ್ಲಾ ಯುವ ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಮಿಥುನ್ ರೈ ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಎ ಸಿ ವಿನಯರಾಜ್, ಪ್ರವೀಣ್ ಚಂದ್ರ ಅಳ್ವಾ ಮತ್ತಿತರರು ಉಪಸ್ಥಿತರಿದ್ದರು.