ಪ್ರಧಾನಿ ಮೋದಿಯವರಿಂದ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಣೆ….
ನವದೆಹಲಿ: ಮೂರನೇ ಹಂತದ ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿರುವ ಸಂದರ್ಭದಲ್ಲಿ ಇದೀಗ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ‘ಆತ್ಮ ನಿರ್ಭರ್ ಭಾರತ ಅಭಿಯಾನ್’ ಮೂಲಕ’ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಒಂದರ ಘೋಷಣೆಯನ್ನು ಮಾಡಿದರು.
ಮಾತ್ರವಲ್ಲದೆ ಇದು ನಮ್ಮ ಜಿಡಿಪಿಯ 10 ಪ್ರತಿಶತವಾಗಿದೆ. ಈ ಆರ್ಥಿಕ ಪ್ಯಾಕೇಜ್ ನಮ್ಮ ಗ್ರಾಮೋದ್ಯೋಗ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳನ್ನೂ ಸೇರಿದಂತೆ ಎಲ್ಲಾ ಉದ್ಯಮ ವಲಯಗಳಿಗೆ, ಶ್ರಮಜೀವಿಗಳಿಗೆ ಮತ್ತು ರೈತ ವರ್ಗಕ್ಕೆ ಬಲ ತುಂಬಲಿದೆ. ಹಾಗೂ ಮೇಕ್ ಇನ್ ಇಂಡಿಯಾದ ಕನಸನ್ನು ಸಾಕಾರಗೊಳಿಸಲಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಕೇಂದ್ರ ವಿತ್ತ ಸಚಿವರು ಈ ಪ್ಯಾಕೇಜ್ ನ ವಿವರಗಳನ್ನು ನಿಮ್ಮ ಮುಂದೆ ಇಡಲಿದ್ದಾರೆ ಎಂದೂ ಹೇಳಿದ್ದಾರೆ.
ನಾವು ದೇಶೀ ಉತ್ಪನ್ನಗಳಿಗೆ ಬಲ ತುಂಬಬೇಕಾಗಿದೆ. ನಾವು ದೇಶೀ ವಸ್ತುಗಳನ್ನು ಖರೀದಿಸುವುದು ಮಾತ್ರವಲ್ಲದೇ ಅದರ ಪ್ರಚಾರವನ್ನು ಮಾಡಬೇಕಾಗಿರುವುದೂ ನಮ್ಮ ಕರ್ತವ್ಯವಾಗಿದೆ.ಈ ಕೋವಿಡ್ ಬಹು ದಿನಗಳವರೆಗೆ ನಮ್ಮೊಂದಿಗೆ ಇರಲಿದೆ. ಹಾಗಾಗಿ ನಾವೆಲ್ಲರೂ ಸುರಕ್ಷಿತ ರೀತಿಯಲ್ಲಿ ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ.ನಾವು ಭಾರತವನ್ನು ಆತ್ಮ ನಿರ್ಭರ ಭಾರತವನ್ನಾಗಿಸುವಲ್ಲಿ ಎಲ್ಲರೂ ಕಾರ್ಯಮಗ್ನರಾಗೋಣ, ಸುರಕ್ಷತೆ ನಮ್ಮ ಆದ್ಯತೆಯಾಗಲಿ ಎಂದ ಅವರು ಮುಂದಿನ ಬಾರಿಯ ಲಾಕ್ ಡೌನ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಈ ಕುರಿತಾದ ಮಾಹಿತಿ ಮೇ 17ರ ಒಳಗೆ ನಿಮಗೆ ನೀಡಲಾಗುವುದು ಎಂದರು.