ಪುತ್ತೂರು ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು….
ಪುತ್ತೂರು: ಪಾಶ್ವಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ನಮ್ಮ ಯುವ ಜನಾಂಗ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿದ್ದೇವೆ. ನಮ್ಮ ಮೂಲ ಸಂಸ್ಕೃತಿಯನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಹೆತ್ತವರು ಮತ್ತು ಸಮಾಜ ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಅನಿವಾರ್ಯತೆ ಇದೆ. ನಾರಾಯಣ ಗುರುಗಳಂಥ ಶ್ರೇಷ್ಠ ದಾರ್ಶನಿಕರ ಕುರಿತು ವಿದ್ಯಾರ್ಥಿಗಳಲ್ಲಿ ಚಿಂತನೆ ಹಚ್ಚಲು ಈ ಸ್ಪರ್ಧಾ ಕಾರ್ಯಕ್ರಮ ಪೂರಕವಾಗಿದೆ ಎಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ಕುಮಾರ್ ಹೇಳಿದರು.
ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ(ರಿ.) ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಏರ್ಪಡಿಸಲಾದ ಪುತ್ತೂರು ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ ತಾಲೂಕು ಸಂಘದ ವತಿಯಿಂದ ಪ್ರತೀ ವರ್ಷ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ವಿಶಿಷ್ಟವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಚಿಂತನೆಗೆ ಹಚ್ಚುವ ಸಭಾ ಕಾರ್ಯಕ್ರಮ ಮತ್ತು ಧಾರ್ಮಿಕ ಭಾವನೆ ಬೆಳೆಸುವ ಗುರು ಪೂಜೆ ನಡೆಸಲಾಗುತ್ತಿದೆ. ಶೈಕ್ಷಣಿಕ ಸ್ಪರ್ಧೆಗಳನ್ನು ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಮುಕ್ತವಾಗಿ ನಡೆಸಲಾಗುತ್ತಿದೆ ಎಂದರು.
ಸ್ಪರ್ಧಾ ಕಾರ್ಯಕ್ರಮಗಳ ಸಂಯೋಜಕರಾದ ಶಿಕ್ಷಕ ಕೋಟ್ಯಪ್ಪ ಪೂಜಾರಿ, ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ ಕಿನ್ನಿಮಜಲ್, ಸಂಘದ ವಿದ್ಯಾನಿಧಿ ಸಂಚಾಲಕ ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ವಿನಯಾ ಬಲ್ನಾಡ್, ಪ್ರಮುಖರಾದ ನಾಗೇಶ್ ಬಲ್ನಾಡ್, ಜಯಂತ ಪೂಜಾರಿ ಕೆಂಗುಡೇಲ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ಕಾಲೇಜು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ, ಚಿತ್ರಕಲೆ, ಭಕ್ತಿಗೀತೆ ಮತ್ತು ಭಾವಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಅವಿನಾಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಕೆಡೆಂಜಿಗುತ್ತು ಪ್ರವೀಣ್ ಕುಮಾರ್ ಸ್ವಾಗತಿಸಿ, ಶಶಿಧರ ಕಿನ್ನಿಮಜಲ್ ವಂದಿಸಿದರು.