ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – ‘ವೃತ್ತಿ ಅವಕಾಶವಾಗಿ ಉದ್ಯಮಶೀಲತೆ ಮತ್ತು ಆವಿಷ್ಕಾರ’ ಕಾರ್ಯಾಗಾರ….

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ‘ವೃತ್ತಿ ಅವಕಾಶವಾಗಿ ಉದ್ಯಮಶೀಲತೆ ಮತ್ತು ಆವಿಷ್ಕಾರ’ ಎಂಬ ವಿಷಯದಲ್ಲಿ ಕಾರ್ಯಾಗಾರ ಫೆ.18 ರಂದು ನಡೆಯಿತು. ಕೇಂದ್ರ ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ಮತ್ತು ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಒನ್ ಅವರ್ ಕಂಪನಿಯ ಸಹ ಸಂಸ್ಥಾಪಕ ಸುಜಿತ್ ಮರೋಳಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಉದ್ಯಮಶೀಲತೆಯ ಇತಿಹಾಸವನ್ನು ತಿಳಿಸಿದ ಅವರು ವಿವಿಧ ಯಶಸ್ವೀ ಉದ್ಯಮಿಗಳ ಸಾಧನೆಗಳು ಹಾಗೂ ಎದುರಿಸಿದ ಸವಾಲುಗಳನ್ನು ವಿವರಿಸಿದರಲ್ಲದೆ ಅವರಿಂದ ಪ್ರೇರಣೆಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಯುವ ಪೀಳಿಗೆಯಿಂದ ಹೊಸ ಹೊಸ ಯೋಚನೆಗಳು, ಆವಿಷ್ಕಾರಗಳು ಮಾಡಲು ಸಾಧ್ಯ. ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಯಾಗುವುದಕ್ಕಿಂತ ಉದ್ಯೋಗ ಸೃಷ್ಟಿಕರ್ತರಾಗಲು ಪ್ರಯತ್ನಿಸಬೇಕು. ಅದಕ್ಕಾಗಿ ನಾವೀನ್ಯತೆ, ಆವಿಷ್ಕಾರದ ಬಗ್ಗೆ ಹೆಚ್ಚು ಯೋಚಿಸಬೇಕು ಎಂದೂ ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಜಿ. ಡಿಸೋಜಾ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪಸ್ ನ ಆಡಳಿತಾಧಿಕಾರಿ ಶಾಹಿದ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು.