ಗಝಲ್…
ಗಝಲ್…
ಮನದ ನೋವು ಹೆಪ್ಪುಗಟ್ಟಿ
ಹೆಣ್ಣು ರೂಪ ತಾಳಿದೆಯಾ ಗೆಳತಿ
ಯಾರ ಕಣ್ಣುಬಿತ್ತು ಕಾಣೆ
ನೋವ ಶಿಲ್ಪ ತಳೆದೆಯಾ ಗೆಳತಿ
ಮಾತು ಅರಳಿ ಹರಿದು ಬಿಡಲು
ನೋವು ಕರಗಿ ನಗುವುದು
ಮೊಗ್ಗು ಅರಳಿ ಚೆಲುವು ಹೊಮ್ಮಲು
ಕಾಣದಾಗಿ ನಿಂದೆಯಾ ಗೆಳತಿ
ನೀಲ ಗಗನದಲಿ ಚಂದ್ರ
ಚೆಲ್ಲಿರಲು ಬೆಳದಿಂಗಳು
ಮನದ ತುಂಬಾ ಕವಿದು ತಿಮಿರ
ನೋವನುಂಡು ನೊಂದೆಯಾ ಗೆಳತಿ
ಜೊತೆಯಿರಲು ಹೊತ್ತಗೆ
ಕಾಯುವೆ ಏಕೆ ಹೊತ್ತಿಗೆ
ಜಗದ ಅರಿವು ಹರಿದುಬರಲು
ಬೆಳಕ ಕಾಣದಾದೆಯಾ ಗೆಳತಿ
ಒಂಟಿಯಾಗಿ ಯಾಕಿರುವೆ
ಜಗವನೊಮ್ಮೆ ತಬ್ಬಿಕೋ
ವಿಪುಲ ಅವಕಾಶವಿದ್ದು
ಬಾಳ ನೋಡದಾದೆಯಾ ಗೆಳತಿ
ಡಾ. ವೀಣಾ ಎನ್ ಸುಳ್ಯ