ಕೊರೋನ ನಿಯಮಗಳನ್ನು ಪ್ರದೇಶಕ್ಕೆ ಅನುಗುಣವಾಗಿ ರೂಪಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ರಿಯಾಜ್ ಕಟ್ಟೆಕಾರ್ ಮನವಿ…
ಸುಳ್ಯ : ಕೊರೋನ ಲಾಕ್ ಡೌನ್ ನಿಯಮವನ್ನು ಆಯಾಯ ಪ್ರದೇಶಕ್ಕೆ ಅನುಗುಣವಾಗಿ ರೂಪಿಸುವಂತೆ ನ. ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೊರೋನ 1ನೇ ಅಲೆಯಿಂದ ಕುಗ್ಗಿ ಹೋದ ಬಡ ಮಧ್ಯಮ ವರ್ಗ ಹಾಗೂ ಕೂಲಿ ಕಾರ್ಮಿಕರು, ಖಾಸಗಿ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕರು ಈಗಿನ 2 ನೇ ಅಲೆಯಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ . ಅಗತ್ಯ ವಸ್ತು ಹೊರತು ಪಡಿಸಿ ಬೇರೆಲ್ಲ ವಾಣಿಜ್ಯ ಮಳಿಗೆಗಳು ಬಂದ್ ಆಗಿದ್ದು ವ್ಯಾಪಾರ ವಹಿವಾಟು ಇಲ್ಲದೆ ಅಲ್ಲಿ ದುಡಿಯುವ ಮಾಲಕರಿಗೆ ತಮ್ಮಲ್ಲಿ ದುಡಿಯುವ ಉದ್ಯೋಗಿಗಳಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಅಂತೆಯೇ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದೆ ಹೊಟ್ಟೆಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿ ಬದುಕಲಾಗದೆ ಆತ್ಮಹತ್ಯೆ ಮಾಡುವಂತಹ ಸ್ಥಿತಿ ಎದುರಾಗಲು ಹೆಚ್ಚು ದಿನಗಳಿಲ್ಲ.
ಕೃಷಿಕರು ಸಹಕಾರಿ ಸಂಘ, ಬ್ಯಾಂಕ್ ಹಾಗೂ ಇತರೆ ಸಂಘ ಗಳಿಂದ ಸಾಲ ಮಾಡಿ ಇದೀಗ ಸಾಲ ಮರುಪಾವತಿ ಮಾಡಲು ತಮ್ಮಲ್ಲಿರುವ ಉತ್ಪತ್ತಿ ಗಳನ್ನು ಮಾರಲು ವ್ಯಾಪಾರಸ್ಥರಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.
ಅಲ್ಲದೆ ಲಾಕ್ ಡೌನ್ ನಿಯಮವನ್ನು ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಬದಲಾವಣೆ ಮಾಡಿದಲ್ಲಿ ಸಡಿಲಿಕೆ ಅವಧಿಯಲ್ಲಿ ಜಾತ್ರೆಯಂತೆ ಜನ ಸೇರುವುದನ್ನು ತಪ್ಪಿಸಬಹುದು. ನಮ್ಮ ಸುಳ್ಯ ತಾಲೂಕಿನ ಜನರಿಗೆ ಹತ್ತಿರದ ಅಂಗಡಿಗಳಲ್ಲಿ ಎಲ್ಲಾ ವಸ್ತುಗಳು ಲಭ್ಯವಿರುವುದಿಲ್ಲ. ಹಲವಾರು ಅಗತ್ಯ ವಸ್ತುಗಳಿಗೆ ಸುಳ್ಯ ಪೇಟೆಯನ್ನೇ ಅವಲಂಭಿಸಬೇಕಾಗಿದೆ. ಕೇವಲ 3 ಗಂಟೆಯ ಕಡಿಮೆ ಸಡಿಲಿಕೆ ಅವಧಿ ಇರುವುದರಿಂದ ಎಲ್ಲರೂ ಒಮ್ಮೆಗೆ ಮುಗಿಬೀಳುವುದು ಸಹಜ.
ಆದುದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚು ಅವಧಿ ಕೊಟ್ಟು ಪಟ್ಟಣಗಳಲ್ಲಿ ಹೋಂ ಡೆಲಿವರಿ ಕೊಡಲು ತಾವುಗಳು ಆದೇಶ ನೀಡಿದಲ್ಲಿ ಪೇಟೆಯಲ್ಲಿ ಇರುವ ಮಂದಿಗೆ ಅನುಕೂಲ ಆಗಿ ಜನದಟ್ಟನೆ ತಡೆಯಬಹುದು. ಹಾಗೂ ಸುಳ್ಯದಲ್ಲಿ ಅತಿ ಕಡಿಮೆ ಸಂಖ್ಯೆ ಇರುವ ಪೊಲೀಸ್ ಸಿಬ್ಬಂದಿ ಗಳು ಮಾತ್ರ ಜನ ದಟ್ಟಣೆ ನಿಯಂತ್ರಿಸಲು ಸಾಧ್ಯವಿಲ್ಲ. ಈಗ ಅನೇಕ ಸರ್ಕಾರಿ ಅಧಿಕಾರಿಗಳು ಕೆಲಸ ಇಲ್ಲದೆ ಮನೆಯಲ್ಲಿಯೇ ಇರುವುದರಿಂದ ಅವರನ್ನು ಕೊರೋನ ವಾರಿಯರ್ಸ್ ಆಗಿ ನಿಯೋಜನೆ ಮಾಡಿದಲ್ಲಿ ಕಾನೂನು ಪಾಲನೆ ಸುಲಭವಾಗಬಹುದು.
ಅಲ್ಲದೆ ಕೂಲಿ ಕಾರ್ಮಿಕರಿಗೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಹಕಾರಿ ಸಂಘದ ಮೂಲಕ ಅಕ್ಕಿ ಹಾಗೂ ಇತರ ಖರ್ಚುಗಳಿಗೆ ಕನಿಷ್ಠ ರೂ.5000 ನೀಡಿದಲ್ಲಿ ಹಸಿವಿನಿಂದ ಸಾಯುವುದನ್ನು ತಡೆಯಬಹುದು. ರೈತರು ಕಾರ್ಮಿಕರು ಕೃಷಿಕರು ಬ್ಯಾಂಕ್ ಸಾಲ, ವಿದ್ಯುತ್ ಬಿಲ್, ಸಂಘ ಸಂಸ್ಥೆಗಳಿಂದ ಮಾಡಿರುವ ಸಾಲದ ಮರುಪಾವತಿಗೆ ಕಳೆದ ವರ್ಷ ಮಾಡಿದಂತೆ ಸಮಯ ಕೊಡಬೇಕೆಂದು ರಿಯಾಜ್ ಕಟ್ಟೆಕಾರ್ ಅವರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.