ವಿದ್ಯುತ್ ದರ ಏರಿಕೆಯ ಮೂಲಕ ಸರ್ಕಾರವು ಜನಸಾಮಾನ್ಯರಿಗೆ ಹೊರೆ – ಶೌವಾದ್ ಗೂನಡ್ಕ…
ಸುಳ್ಯ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗವು ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 30 ಪೈಸೆ ಏರಿಸಿರುವುದು ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ಟೀಕಿಸಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ಸರ್ಕಾರ ವಿದ್ಯುತ್ ದರವನ್ನು ಮೂರು ಬಾರಿ ಏರಿಕೆ ಮಾಡಿದೆ.ವಿದ್ಯುತ್ ಖರೀದಿ ದರ ತೀರಾ ಇಳಿಮುಖವಾಗಿರುವ ಸಂದರ್ಭದಲ್ಲಿ ದರ ಏರಿಸಿರುವುದು ಜನತೆಯ ಮೇಲೆ ಹೇರಿದ ಇನ್ನೊಂದು ಹೊರೆಯಾಗಿದೆ ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ಹಾಗೂ ದೇಶದಲ್ಲಿ ವಿದ್ಯುತ್ ಉತ್ಪಾದನಾ ವಲಯಗಳಾದ ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದಿಸುತ್ತಿರುವ ವಿದ್ಯುತ್ ಅನ್ನು ಆಯೋಗ 2011-12 ರ ಅವಧಿಯಲ್ಲಿ ಯೂನಿಟ್ ಗೆ ರೂ.5.50 ರಂತೆ ಖರೀದಿಸುತ್ತಿತ್ತು ಈಗ ಖರೀದಿ ದರ ರೂ.3.10 ಕ್ಕೆ ಇಳಿದಿದೆ.ಸೋಲಾರ್ ವಿದ್ಯುತ್ತನ್ನು ರೂ.17 ಕ್ಕೆ ಖರೀದಿಸುತ್ತಿದ್ದದ್ದನ್ನು ಈಗ ಯೂನಿಟ್ ಗೆ ರೂ.2 ರಂತೆ ಖರೀದಿಸಲಾಗುತ್ತಿದೆ.ವಿದ್ಯುತ್ ಮಾರಾಟದ ಬೆಲೆ ಕಡಿಮೆಯಾದಾಗ ಪ್ರಸರಣ ಆಯೋಗ ವಿದ್ಯುತ್ ದರ ಇಳಿಕೆ ಮಾಡಬೇಕು. ಆದರೆ ಸರ್ಕಾರ ಈ ಲಾಕ್ ಡೌನ್ ಸಂದರ್ಭದಲ್ಲೇ ವಿದ್ಯುತ್ ದರ ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ.ಕೊರೋನಾ ಸಂದರ್ಭದಲ್ಲಿ ಜನರು ಕೆಲಸವಿಲ್ಲದೆ ದಿನ ದೂಡುವುದೇ ಕಷ್ಟಸಾಧ್ಯವಾಗಿದೆ. ದಿನಸಿ ಸಾಮಾಗ್ರಿ ಬಿಟ್ಟರೆ ಬೇರೆ ಯಾವ ಅಗತ್ಯ ವಸ್ತುಗಳನ್ನು ಖರೀದಿಸಲು ಜನರಿಂದ ಆಗುತ್ತಿಲ್ಲ. ಒಂದು ಕಡೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನರು ತಮ್ಮ ದೈನಂದಿನ ಜೀವನವನ್ನು ನಡೆಸುವುದೇ ದುಸ್ತರವಾಗಿರುವ ಈ ವೇಳೆ ವಿದ್ಯುತ್ ದರವನ್ನು ಏರಿಸಿರುವುದು ಸರಿಯಲ್ಲ, ಸರ್ಕಾರವು ಇದನ್ನು ಕೂಡಲೇ ಹಿಂಪಡೆಯಬೇಕೆಂದು ಶೌವಾದ್ ಗೂನಡ್ಕ ಆಗ್ರಹಿಸಿದ್ದಾರೆ.