ದ.ಕ.ಜಿಲ್ಲೆಯಲ್ಲಿ ಅತ್ಯಧಿಕ ಕೋವಿಡ್ ಪ್ರಕರಣ, ಜನಸಾಮಾನ್ಯರನ್ನು ಆತಂಕಕ್ಕೆ ದೂಡಿದೆ — ಶೌವಾದ್ ಗೂನಡ್ಕ…

ಮಂಗಳೂರು:ದಿನದಿಂದ ದಿನಕ್ಕೆ ದ.ಕ.ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೂರನೇಯ ಅಲೆ ಹರಡುತ್ತಿದೆಯೇ ಎಂಬ ಆತಂಕ ಜನಸಾಮಾನ್ಯರಲ್ಲಿ ಮೂಡಿದೆ. ರಾಜ್ಯದಲ್ಲಿ ಪ್ರಸ್ತುತ ಅತ್ಯಧಿಕ ಕೋವಿಡ್ ಪ್ರಕರಣಗಳು ನಮ್ಮ ಜಿಲ್ಲೆಯಲ್ಲೇ ದಾಖಲಾಗುತ್ತಿರುವುದು ಮುಂದಿನ ದಿನಗಳಲ್ಲಿ ಜಿಲ್ಲೆಯು ಮತ್ತೆ ಲಾಕ್ ಡೌನ್ ಕಡೆಗೆ ಮುಖ ಮಾಡಬಹುದೇ ಎಂಬ ಪ್ರಶ್ನೆಯು ಎದ್ದಿದೆ. ಜಿಲ್ಲಾಡಳಿತವು ಕೋವಿಡ್ ತಡೆಗಟ್ಟಲು ಇನ್ನೂ ಹೆಚ್ಚಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರರಾದ ಶೌವಾದ್ ಗೂನಡ್ಕರವರು ಆಗ್ರಹಿಸಿದ್ದಾರೆ.
ಮತ್ತೆ ಲಾಕ್ ಡೌನ್ ಜಾರಿಗೊಳಿಸಿದ್ದಲ್ಲಿ ದುಡಿಯುವ ವರ್ಗಗಳನ್ನು ಸಂಕಷ್ಟಕ್ಕೆ ದೂಡಿದಂತಾಗುತ್ತದೆ. ಈಗಾಗಲೇ ವ್ಯಾಪಾರ, ವಹಿವಾಟುಗಳು ನಿಧಾರವಾಗಿ ಪುನರಾರಂಭವಾಗುತ್ತಿದೆ.ಕೋವಿಡ್ ತಡೆಗಟ್ಟುವುದರೊಂದಿಗೆ ಜನಸಾಮಾನ್ಯರ ದೈನಂದಿನ ಬದುಕಿನ ಕಡೆಗೂ ಸರ್ಕಾರ ಪ್ರಾಮುಖ್ಯತೆಯನ್ನು ನೀಡಬೇಕು, ಆ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರಗಳು ಜನವಿರೋಧಿಯಾಗದೇ ಇರಲಿ ಎಂದು ಶೌವಾದ್ ಗೂನಡ್ಕರವರು ತಿಳಿಸಿದ್ದಾರೆ.ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರವು ಇನ್ನೂ ಕೂಡ ಗಂಭೀರವಾಗಿಲ್ಲ. “ಎಲ್ಲರಿಗೂ ಲಸಿಕೆ, ಎಲ್ಲರಿಗೂ ಉಚಿತ” ಎಂಬ ಪ್ರಚಾರವನ್ನು ಮಾತ್ರ ಮಾಡಲಾಗುತ್ತಿದೆ ಆದರೆ ನಮ್ಮ ಜಿಲ್ಲೆಯಲ್ಲಿ ಪ್ರಸ್ತುತ ಲಸಿಕೆಯ ಅಭಾವವಿದೆ ಎಂದವರು ಹೇಳಿದ್ದಾರೆ.