ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ – ಮಂಜುನಾಥ ಭಂಡಾರಿ…

ಮಂಗಳೂರು: ಈ ವರ್ಷದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಗ್ರಾಮ ಪಂಚಾಯತಿಗೆ ಕೊಡುವಂತಹ ಅನುದಾನ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಮತ್ತು ಇತರ ಭತ್ಯೆಗಳನ್ನು ಹೆಚ್ಚಿಸಬೇಕೆಂದು ಚುನಾಯಿತ ಪ್ರತಿನಿಧಿಗಳಾದ ನಾವು ಸರಕಾರದ ಮುಂದಿಟ್ಟ ಬೇಡಿಕೆಯನ್ನು ನಿರ್ಲಕ್ಷಿಸಿದ್ದಕ್ಕೆ ಅತ್ಯಂತ ಬೇಸರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಮಾರ್ಗಸೂಚಿಯಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಮಹತ್ವದ ಘೋಷಣೆಯಾಗಿಲ್ಲ ಹಾಗೂ ಈಗಾಗಲೇ ಇದ್ದ ಸರಕಾರಿ ಕಾಲೇಜುಗಳನ್ನು ನಡೆಸಲು ಸಾಧ್ಯವಾಗದ ಸರಕಾರ ಹಳೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ಹೆಸರನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದು ಮರು ನಾಮಕರಣ ಮಾಡಲು ಹೊರಟ ನಿರ್ಧಾರ ಅತ್ಯಂತ ನಿರಾಶಾದಾಯಕವಾಗಿದೆ.
ನರೇಂದ್ರ ಮೋದಿಯವರ ಹಳೆಯ 2 ಕೋಟಿ ಉದ್ಯೋಗ ಸೃಷ್ಟಿ ಘೋಷಣೆಗೆ ವಿರುದ್ಧವಾಗಿ ಈ ವರ್ಷದ ಕೇಂದ್ರ ಸರಕಾರದ ಬಜೆಟ್ ನಲ್ಲಿ ಮುಂದಿನ 5 ವರ್ಷಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಘೋಷಣೆಯಾದರೂ ಮುಖ್ಯಮಂತ್ರಿಯವರು ಉದ್ಯೋಗ ಸೃಷ್ಟಿಯ ಬಗ್ಗೆ ನಿರ್ಲಕ್ಷ ತೋರಿದ್ದಾರೆ ಎಂದು ಮಂಜುನಾಥ ಭಂಡಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.