ಮಂಗಳೂರಿನಲ್ಲಿ ಬೃಹತ್ ಪ್ರವಾಸಿ ಹಡಗು ಐಡಾ ವಿಟಾ….
ಮಂಗಳೂರು: 1,154 ಪ್ರವಾಸಿಗರು, 407 ಸಿಬ್ಬಂದಿ ಇರುವ ಬೃಹತ್ ಪ್ರವಾಸಿ ಹಡಗು ಐಡಾ ವಿಟಾ ಸೋಮವಾರ ನವಮಂಗಳೂರು ಬಂದರಿಗೆ ಆಗಮಿಸಿತು.
ಪ್ರವಾಸಿಗರಿಗೆ ಹೆಲಿಕಾಪ್ಟರ್ ಸೇವೆ ಒದಗಿಸುವ ಎನ್‌ಎಂಪಿಟಿ ಹೆಲಿಟೂರಿಸಂಗೆ ಈ ಸಂದರ್ಭ ಚಾಲನೆ ನೀಡಲಾಯಿತು. 16 ಪ್ರವಾಸಿಗರು ಹೆಲಿಕಾಪ್ಟರ್‌ನಲ್ಲಿ ಬೇಕಲ ಕೋಟೆ ವೀಕ್ಷಿಸಿ ಸಂಭ್ರಮಿಸಿದರು.
ಮೂಲತಃ ಸಿಂಗಾಪುರದ, ಪನಾಮ ಧ್ವಜ ಹೊಂದಿರುವ ಐಡಾ ವಿಟಾ ಆಗಮಿಸಿದಾಗ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಯಕ್ಷಗಾನ, ಕಂಗೀಲು, ಹುಲಿ ವೇಷ ನೃತ್ಯದ ಮೂಲಕ ಸ್ವಾಗತ ಕೋರಲಾಯಿತು. ಅ. 28ರಂದು ದುಬಾೖಯಿಂದ ಹೊರಟ ಹಡಗು ಗೋವಾದ ಮೂಲಕ ಮಂಗಳೂರಿಗೆ ಆಗಮಿಸಿತು. ಬಳಿಕ ಕೊಚ್ಚಿಗೆ ತೆರಳಿ, ಮಾಲ್ಡೀವ್ಸ್, ಕೊಲಂಬೊ, ಮಲೇಷಿಯಾ, ಸಿಂಗಾಪುರ ಸಹಿತ 21 ದಿನಗಳ ಕಾಲ ವಿವಿಧ ದೇಶಗಳಲ್ಲಿ ಪರ್ಯಟನೆ ನಡೆಸಲಿದೆ.
ಎನ್‌ಎಂಪಿಟಿ ಚೇರ್‌ಮನ್ ಎಂ. ವೆಂಕಟರಮಣ ಅಕ್ಕರಾಜು ಅವರು ಪ್ರವಾಸಿಗರಿಗೆ ಸ್ವಾಗತ ಕೋರಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಪ್ರವಾಸಿಗರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜತೆಗೆ ಸುತ್ತಲಿನ ಜಿಲ್ಲೆಗಳ ಪ್ರಸಿದ್ಧ ಸ್ಥಳಗಳನ್ನು ತೋರಿಸುವ ಸಲುವಾಗಿ ಹೆಲಿ ಟೂರಿಸಂ ಆರಂಭಿಸಿದ್ದೇವೆ. ಪ್ರಥಮ ಹಂತದಲ್ಲೇ 16 ವಿದೇಶಿಗರು ಹೆಲಿಕಾಪ್ಟರ್‌ನಲ್ಲಿ ಕಾಸರಗೋಡು ಜಿಲ್ಲೆಯ ಬೇಕಲಕ್ಕೆ ಪ್ರಯಾಣಿಸಿದ್ದಾರೆ ಎಂದರು. ಈ ಬಾರಿ 24 ಪ್ರವಾಸಿ ಹಡಗುಗಳು ಆಗಮಿಸುವ ನಿರೀಕ್ಷೆ ಯಿದ್ದು 5 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಪ್ರವಾಸಿಗರಿಂದ ಪೂರಕವಾಗಿ ಸಾರಿಗೆ ಉದ್ಯಮ, ವಿದೇಶಿ ವಿನಿಮಯವೂ ಹೆಚ್ಚುತ್ತದೆ ಎಂದು ತಿಳಿಸಿದರು.
ವಿದೇಶೀ ಪ್ರವಾಸಿಗರನ್ನು ಸ್ಥಳೀಯ ವಾಗಿ ಮಂಗಳೂರು, ಮೂಡುಬಿದಿರೆ, ಕಾರ್ಕಳ ಸಹಿತ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ದು ತೋರಿಸಲಾಯಿತು. ಪ್ರವಾಸಿಗರ ತಿರುಗಾಟಕ್ಕಾಗಿ ಬಸ್, ಪ್ರಿಪೇಯ್ಡ ಕಾರು, ರಿಕ್ಷಾ ವ್ಯವಸ್ಥೆ ಮಾಡಲಾಗಿತ್ತು.