ಬಿ.ದಾಮೋದರ ನಿಸರ್ಗ ಸಂಸ್ಮರಣೆ – ಪುನರೂರು ಅವರಿಗೆ ಪ್ರಶಸ್ತಿ…
ತುಳು ಭಾಷೆ - ಸಂಸ್ಕೃತಿಯ ನೈಜ ಹೋರಾಟಗಾರ ನಿಸರ್ಗ: ಭಾಸ್ಕರ ರೈ ಕುಕ್ಕುವಳ್ಳಿ...

ಮಂಗಳೂರು: ‘ತುಳುನಾಡು, ನುಡಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಪಣತೊಟ್ಟು ಹೋರಾಡಿದ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ನಮ್ಮಲ್ಲಿವೆ. ತುಳು ಚಳುವಳಿಯ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಹಿರಿಯರೆಲ್ಲ ಗತಿಸಿ ಹೋಗಿದ್ದಾರೆ. ಯಾವುದಕ್ಕೂ ಒಂದು ತಾರ್ಕಿಕ ಅಂತ್ಯ ಈ ವರೆಗೆ ಲಭಿಸಿಲ್ಲವಾದರೂ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಸರಣಕ್ಕೆ ಪ್ರಾಮಾಣಿಕವಾಗಿ ದುಡಿದವರು ಸದಾ ಸ್ಮರಣೀಯರು. ಅಂಥವರಲ್ಲಿ ಮೂರು ದಶಕಗಳಷ್ಟು ಕಾಲ ಕುಡ್ಲ ತುಳುಕೂಟದ ಚುಕ್ಕಾಣಿ ಹಿಡಿದು ಕೆಲಸ ಮಾಡಿದ ದಾಮೋದರ ನಿಸರ್ಗರು ತುಳು ಭಾಷೆ ಮತ್ತು ಸಂಸ್ಕೃತಿಯ ನೈಜ ಹೋರಾಟಗಾರರು’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಬಿ.ದಾಮೋದರ ನಿಸರ್ಗ ಸಂಸ್ಮರಣ ಸಮಿತಿ ವತಿಯಿಂದ ಅಗೊಸ್ತು 31ರಂದು ಭಾನುವಾರ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರಗಿದ ದ್ವಿತೀಯ ಸಂಸ್ಮರಣ ಸಮಾರಂಭದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.
‘ಸುದೀರ್ಘಕಾಲ ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷರಾಗಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮತ್ತು ಕಂಕನಾಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊಕ್ತೇಸರರಾಗಿ, ಬೋಳೂರು ದೋಗ್ರ ಪೂಜಾರಿ ಯಕ್ಷಗಾನ ಪ್ರಶಸ್ತಿಯ ಸಂಸ್ಥಾಪಕರಾಗಿ ದಾಮೋದರ ನಿಸರ್ಗರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಗಣನೀಯ’ ಎಂದವರು ಸ್ಮರಿಸಿದರು. ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಅರುಣ್ ಕುಮಾರ್ ಐತಾಳ್ ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ದಿ.ನಿಸರ್ಗ ಅವರ ಪತ್ನಿ ಹೇಮಾ ದಾಮೋದರ ನಿಸರ್ಗ ಮತ್ತು ಮಕ್ಕಳು ಸ್ಥಾಪಿಸಿದ ಎರಡನೇ ವರ್ಷದ ‘ಬಿ.ದಾಮೋದರ ನಿಸರ್ಗ ಪ್ರಶಸ್ತಿ’ಯನ್ನು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಕರ್ಮಯೋಗಿ ಡಾ.ಹರಿಕೃಷ್ಣ ಪುನರೂರು ಅವರಿಗೆ ಪ್ರದಾನ ಮಾಡಲಾಯಿತು. ಊರ್ಮಿಳಾ ರಮೇಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುನರೂರು ಅವರು ‘ಪ್ರತ್ಯೇಕ ತುಳುರಾಜ್ಯ ಸ್ಥಾಪನೆ ಆಗುವಲ್ಲಿ ವರೆಗೆ ತುಳು ಭಾಷೆಗೆ ನ್ಯಾಯ ದೊರೆಯುವ ಸಾಧ್ಯತೆ ಕಡಿಮೆ. ಅದಕ್ಕಾಗಿ ಸಂಘಟಿತ ಪ್ರಯತ್ನ ಅಗತ್ಯ’ ಎಂದರು.’ ತುಳುಕೂಟ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಹರಿಕಥಾ ಪರಿಷತ್ ಅಧ್ಯಕ್ಷ ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಲು , ಲೇಖಕ ಡಾ.ವಸಂತ ಕುಮಾರ್ ಪೆರ್ಲ ಅತಿಥಿಗಳಾಗಿದ್ದರು.
ಮಂಗಳೂರು ತುಳುಕುಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವಿ ಅಲೆವೂರಾಯ ವರ್ಕಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಡಾ. ವಿನ್ಯಾಸ್ ನಿಸರ್ಗ ಪ್ರಶಸ್ತಿ ಪತ್ರ ವಾಚಿಸಿದರು. ನಾಗೇಶ್ ದೇವಾಡಿಗ ಕದ್ರಿ ಪ್ರಾರ್ಥಿಸಿದರು. ಸಂಸ್ಮರಣಾ ಸಮಿತಿ ಪ್ರಮುಖರಾದ ಡಾ.ವಿನಯ್ ಜತ್ತನ್ನ, ತ್ರಿದೇವ್ ನಿಸರ್ಗ ಮತ್ತು ಡಾ.ಮೇಘ ತ್ರಿದೇವ್ ನಿಸರ್ಗ ಅತಿಥಿಗಳನ್ನು ಗೌರವಿಸಿದರು. ನಾರಾಯಣ ಬಿ.ಡಿ. ವಂದಿಸಿದರು.
ತುಳು ಯಕ್ಷಗಾನ:
ಕಾರ್ಯಕ್ರಮದ ಅಂಗವಾಗಿ ಸರಯೂ ಯಕ್ಷ ಬಳಗ ಕೋಡಿಕಲ್ ಅವರಿಂದ ‘ಕೋಟಿ ಚೆನ್ನಯೆರ್’ ತುಳು ಯಕ್ಷಗಾನ ಬಯಲಾಟ ಜರಗಿತು. ಹವ್ಯಾಸಿಗಳೊಂದಿಗೆ ವೃತ್ತಿಪರ ಕಲಾವಿದರೂ ಹಿಮ್ಮೇಳ – ಮುಮ್ಮೇಳಗಳಲ್ಲಿ ಭಾಗವಹಿಸಿದ್ದರು.