ಕಲ್ಲಡ್ಕದಲ್ಲಿ ಮೋಕ್ಷಧಾಮ ಹಿಂದೂ ರುದ್ರಭೂಮಿ ಲೋಕಾರ್ಪಣೆ…..
ಬಂಟ್ವಾಳ : ದು:ಖಿತರಿಗೆ, ನೋವುಂಡವರಿಗೆ, ದುರ್ಬಲರಿಗೆ ಸಹಾಯ ಮಾಡುವ ದೃಷ್ಟಿಯಲ್ಲಿ ಹುಟ್ಟಿಕೊಂಡ ಸಂಸ್ಥೆ ಕಲ್ಲಡ್ಕದ ಶ್ರೀ ಗುರೂಜಿ ಸ್ವಯಂಸೇವಾ ಸಂಘ. ಬಾಳ್ತಿಲ ಪಾಣೆಮಂಗಳೂರು, ಗೋಳ್ತಮಜಲು ಗ್ರಾಮ ಸಂಗಮದ ಸ್ಥಳದಲ್ಲಿ ಮೋಕ್ಷಧಾಮ ಹಿಂದೂ ರುದ್ರಭೂಮಿ ನಿರ್ಮಾಣ ಕೆಲಸ ಮಾಡಿದೆ. ಯಾವುದೇ ಪ್ರಚಾರ ಬಯಸದೆ ಸಮಾಜದ ಹಿತಕ್ಕಾಗಿ ಅರ್ಪಣೆ ಆಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಜ. 17ರಂದು ಮೋಕ್ಷಧಾಮ ಹಿಂದೂ ರುದ್ರಭೂಮಿ ನೂತನ ನಿರ್ಮಾಣಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ರುದ್ರಭೂಮಿಯಲ್ಲಿ ಇರಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವಲ್ಲಿ ವ್ಯವಸ್ಥೆಗಳು ಆಗಿದೆ. ಬೌತಿಕ
ದೇಹದ ಸಂಸ್ಕಾರ ಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವುದಕ್ಕೂ ಇಲ್ಲಿ ಒಬ್ಬ ವ್ಯಕ್ತಿಯ ನೇಮಕವಾಗಿದೆ. ಇದು ಸ್ವಯಂಸೇವಾ ಸಂಘದ ನೈಜ ಕಳಕಳಿಯಾಗಿದೆ. ಕಲ್ಲಡ್ಕ ಅನೇಕ ವಿಷಯದಲ್ಲಿ ಮಾದರಿಯಾಗಿದೆ ಇಬ್ಬರು ಶಾಸಕರನ್ನು ಸಮಾಜಕ್ಕೆ ನೀಡಿದೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ನಾಯಕತ್ವಕ್ಕೂ ಹೆಸರಾಗಿದೆ ಎಂದು ವಿವರಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯ ಮೂಲಕ ಒಳ್ಳೆಯ ಕೆಲಸ ಆಗಿದೆ. ಉಳಿಕೆ ಕೆಲಸ ಕಾರ್ಯಗಳಿಗೆ ಶಾಸಕನ ನೆಲೆಯಲ್ಲಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ ಪ್ರಧಾನಿ ಮೋದಿ ಅವರ ಸ್ವಚ್ಚತೆಯ ಪರಿಕಲ್ಪನೆಯನ್ನು ಶ್ರೀಗುರೂಜಿ ಸಂಘವು ಅಕ್ಷರಃ ಪಾಲಿಸುವುದು. ಯಾವುದೇ ತ್ಯಾಜ್ಯ ವಿಸರ್ಜನೆಗೆ ಅವಕಾಶ ಆಗದಂತೆ ಕ್ರಮ ಕೈಗೊಂಡಿದೆ. ನಾನು ತಾ.ಪಂ. ಅಧ್ಯಕ್ಷನಾಗಿದ್ದ ಕಾಲದಲ್ಲಿ ಇಂತಹ ಯೋಜನೆ ಪರಿಕಲ್ಪನೆ ಬಂದಿದ್ದರೂ ಅದು ಸ್ವಯಂಸೇವಾ ನೆಲೆಯಲ್ಲಿ ಅನುಷ್ಠಾನಕ್ಕೆ ಬಂದಿರುವುದು ಈಗ ಎಂದರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಮಾತನಾಡಿ ಸಂಘದ ನೈಜ ಕಳಕಳಿ ವ್ಯಕ್ತವಾಗಿದೆ. ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಿ ದೊಡ್ಡ ಮೊತ್ತದ ನಿರ್ಮಾಣ ಮಾಡಿರುವುದು ಒಂದು ಸಾಧನೆ. ರುದ್ರಭೂಮಿ ನಿರ್ಮಾಣಕ್ಕೆ ಸುಮಾರು 17 ಲಕ್ಷ ರೂ. ವೆಚ್ಚವಾಗಿದ್ದು ಅದರಲ್ಲಿ 14 ಲಕ್ಷ ರೂ. ಸಂಘದ ಸದಸ್ಯರೇ ಸಂಗ್ರಹಿಸಿ ಭರಿಸಿದ್ದಾರೆ ಎಂದು ಭಾವುಕರಾಗಿ ನುಡಿದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ.ಸದಸ್ಯರಾದ ಲಕ್ಷ್ಮೀಗೋಪಾಲ ಆಚಾರ್ಯ, ಮಹಾಬಲ ಆಳ್ವ, ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಠಲ ನಾಯ್ಕ, ಬಂಟ್ವಾಳ ಪುರಸಭಾ ಸದಸ್ಯ ಜಯರಾಮ ಜಿ., ಗುರೂಜಿ ಸ್ವಯಂ ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಟೈಲರ್, ಉದ್ಯಮಿ ದಿನೇಶ ಶೆಣೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಿವಾಕರ ಚೆಂಡೆ, ಪುಷ್ಪರಾಜ ಕುದ್ರೆಬೆಟ್ಟು, ವಿಶ್ವನಾಥ ಕಲ್ಲಡ್ಕ ಅವರ ವಿವಿಧ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ವೆಂಕಟ್ರಾಯ ಪ್ರಭು ಸ್ವಾಗತಿಸಿ, ಯತಿನ್ ಕುಮಾರ್ ಏಳ್ತಿಮಾರ್ ಪ್ರಸ್ತಾವನೆ ನೀಡಿದರು. ಸುಜಿತ್ ಕೊಟ್ಟಾರಿ ವಂದಿಸಿದರು. ಗೋಪಾಲ ಬಲ್ಯಾಯ ಕಾರ್ಯಕ್ರಮ ನಿರ್ವಹಿಸಿದರು.