ಮಾರ್ಚ್ 4 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ – ನಿಷೇಧಾಜ್ಞೆ ಜಾರಿ…

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಮಾ.4 ರಿಂದ 23 ರವರೆಗೆ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಯಾವುದೇ ತೊಂದರೆ ಇಲ್ಲದೆ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಜೆರಾಕ್ಸ್ ಕೇಂದ್ರಗಳನ್ನು ಮುಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ನಿಷೇಧಾಜ್ಞೆ ಜಾರಿ ಮಾಡಲು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾರ್ಥಿಗಳು ನಕಲು ಮಾಡುವುದು, ನಕಲು ಮಾಡಲು ಸಹಾಯ ಮಾಡುವುದು, ಬದಲಿ ವ್ಯಕ್ತಿಯಾಗಿ ಪರೀಕ್ಷೆ ಬರೆಯುವುದು, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ಮೊಬೈಲ್ ಉಪಯೋಗಿಸುವುದು ಪರೀಕ್ಷಾ ಅಕ್ರಮಗಳಾಗಿದ್ದು, ಇಂತಹ ಅಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಕ್ರಮ ವಹಿಸಲಾಗುವುದು. ಕೊಠಡಿ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಅಕ್ರಮ ಎಸಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳು ಮುಳ್ಳು ಹೊಂದಿರುವ ಸಾಮಾನ್ಯ ಕೈಗಡಿಯಾರವನ್ನು ಧರಿಸಲು ಅನುಮತಿ ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಹಾಗೆಯೇ ನಿಷೇಧಿತ ಪ್ರದೇಶದಲ್ಲಿ ಯಾವುದೇ ಮಾರಕ ಆಯುಧಗಳನ್ನು ಹಾಗೂ ಸ್ಪೋಟಕ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ರವಾನೆ ಮಾಡುವುದು ಅಥವಾ ತಿಳಿಸಲು ಸನ್ನೆ ಮಾಡುವುದು ಹಾಗೂ ಇನ್ನಿತರ ಕ್ರಿಯೆಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
ಪರೀಕ್ಷೆ ಆರಂಭವಾಗುವ ಒಂದು ಗಂಟೆಗ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ.