ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ವ್ಯಾಪಾರ ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರ….
ಮಂಗಳೂರು : ಸೆಂಟ್ರಲ್ ಮಾರ್ಕೆಟ್‌ನ ತರಕಾರಿ, ಹಣ್ಣು ವ್ಯಾಪಾರ ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರಿಸಿ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ದ.ಕ. ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸೆಂಟ್ರಲ್ ಮಾರ್ಕೆಟ್‌ಗೆ ಚಿಲ್ಲರೆ ವ್ಯಾಪಾರಿಗಳನ್ನು ಹೊರತುಪಡಿಸಿ ಸಾರ್ವಜನಕರ ಪ್ರವೇಶವನ್ನು ನಿರ್ಬಂಧಿಸಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ತರಕಾರಿ ಹಾಗೂ ಹಣ್ಣಿನ ಅಂಗಡಿಗಳಲ್ಲಿ ಖರೀದಿ ಮಾಡಬೇಕಾಗಿದೆ.
ಬಂದರಿನ ದಿನಸಿ ವಸ್ತುಗಳ ಸಗಟು ವ್ಯಾಪಾರ ಎಂದಿನಂತೆ ಮುಂದುವರಿಯುತ್ತದೆ. ಸಗಟು ವ್ಯಾಪಾರಿಗಾರರು ಸಾರ್ವಜನಿಕರಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಬಂದರಿನಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಸಗಟು ವಾಹನಗಳ ಸಾಮಾನುಗಳನ್ನು ಇಳಿಸಲು ಮಾತ್ರ ಅವಕಾಶವಿದ್ದು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಸಗಟು ಮಾರಾಟಗಾರರು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶವಿದೆ.
ಇನ್ನು ಜಿಲ್ಲೆಯಾದ್ಯಂತ ಎಲ್ಲಾ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳು ಹಾಗೂ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ಬಳಸುವ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹಾಗೆಯೇ ಗುರುತಿನ ಚೀಟಿ ಹೊಂದಿರುವ ವೈದ್ಯಕೀಯ ಸಿಬ್ಬಂದಿಗಳು, ಮಾಧ್ಯಮದವರಿಗೆ ಸಂಚಾರಕ್ಕೆ ಅವಕಾಶವಿದೆ.