ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 10 ಮಂದಿಗೆ ಕೊರೊನಾ ಪಾಸಿಟಿವ್- ದ. ಕ. ಜಿಲ್ಲೆಯಲ್ಲಿ ಓರ್ವ ಸೋಂಕಿತೆ ಗುಣಮುಖ….
ಕಾಸರಗೋಡು/ಮಂಗಳೂರು : ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 10 ಮಂದಿಯ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಹತ್ತು ಮಂದಿಯಲ್ಲಿ ಆರೋಗ್ಯ ಸಿಬ್ಬಂದಿ, ಜನಪ್ರತಿನಿಧಿ, ಸಾಮಾಜಿಕ ಕಾರ್ಯಕರ್ತ, ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸೇರಿದ್ದಾರೆ.
ಮೇ.4 ರಂದು ಮುಂಬೈಯಿಂದ ಆಗಮಿಸಿದ ಪೈವಳಿಕೆ ನಿವಾಸಿಯನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಜನಪ್ರತಿನಿದಿಯಾದ ಅವರ ಪತ್ನಿ ಹಾಗೂ ಅವರ 11 ಮತ್ತು 8 ವರ್ಷದ ಮಕ್ಕಳಲ್ಲಿ ಸೋಂಕು ದ್ರಢಪಟ್ಟಿದೆ. ತಲಪಾಡಿಗೆ ತಲಪಿದ್ದ ಸಂಬಂಧಿಕನನ್ನು ಕರೆದುಕೊಂಡು ಬಂದಿದ್ದು, ಮುಂಬೈಯಿಂದ ಬಂದಿದ್ದ ವ್ಯಕ್ತಿಗೆ ಎರಡು ದಿನಗಳ ಹಿಂದೆ ಸೋಂಕು ಧೃಢವಾಗಿತ್ತು. ಇದೀಗ ಅವರನ್ನು ಕರೆದುಕೊಂಡು ಬಂದಿದ್ದ ವ್ಯಕ್ತಿಯ ಮನೆಯ ನಾಲ್ವರಿಗೂ ಸೋಂಕು ದೃಢಪಟ್ಟಿದೆ.
ಕುಂಬಳೆಯ ಇಬ್ಬರು, ಕಳ್ಳಾರ್ ನ ಓರ್ವ ಹಾಗೂ ಕಾಸರಗೋಡು ನಗರಸಭಾ ವ್ಯಾಪ್ತಿಯ ಓರ್ವನಲ್ಲಿ ಗುರುವಾರ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1428 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 1211 ಮಂದಿ, 217 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಗುರುವಾರ 35 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.
ಇನ್ನು ದ.ಕ. ಜಿಲ್ಲೆಯಲ್ಲಿ ಗುರುವಾರದಂದು ಓರ್ವ ಕೊರೊನಾ ಸೋಂಕಿತೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಪ್ಪಿನಂಗಡಿ ನಿವಾಸಿ 30 ವರ್ಷದ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದು, ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.