ಕೊರೋನಾ ಪ್ಯಾಕೇಜ್- ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಳ್ಯ ಶಾಸಕ ಅಂಗಾರ ಕೃತಜ್ಞತೆ…..
ಸುಳ್ಯ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಕೋವಿಡ್ 19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಜನರ ನೆರವಿಗೆ ನೀಡಿರುವ ಪ್ಯಾಕೇಜ್ ಗಳಿಗೆ ಸುಳ್ಯ ಶಾಸಕ ಎಸ್.ಅಂಗಾರ ಕೃತಜ್ಞತೆ ಸಲ್ಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ 20 ಲಕ್ಷ ಕೋ.ರೂ. ಪ್ಯಾಕೇಜ್ ಎಲ್ಲ ವರ್ಗಗಳ ಜನರಿಗೆ ಸಹಿಕಾರಿಯಾಗಲಿದೆ. ಕೃಷಿ ಸಮ್ಮಾನ್ ಖಾತೆಗೆ 2000 ರೂ. ಹಾಗೂ ಜನ್‌ಧನ್ ಖಾತಗೆ ರೂ. 500 ಈಗಾಗಲೇ ಜಮೆ ಮಾಡಲಾಗಿದೆ. ಉಜ್ವಲ್ ಯೋಜನೆ ಫಲಾನುಭವಿಗಳಿಗೆ ಉಚಿತ ಗ್ಯಾಸ್ ನೀಡಲಾಗಿದೆ ಎಂದರಲ್ಲದೆ ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೆ ಸಹಾಯಧನ ದೊರೆಯದಿರುವುದರಿಂದ ಶೇ. 60ರಷ್ಟು ಅರ್ಹ ಚಾಲಕರಿಗೆ ತೊಂದರೆ ಉಂಟಾಗುವ ಬಗ್ಗೆ ಚಾಲಕರು ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.
ಸುಳ್ಯದ 110 ಕೆ.ವಿ. ವಿದ್ಯುತ್ ವಿತರಣೆ ಕಾಮಗಾರಿಯ ವಿದ್ಯುತ್ ಲೈನ್‌ಮಾರ್ಗ ಹಾದು ಹೋಗುವ ಸ್ಥಳದಲ್ಲಿ ಅರಣ್ಯ ಭೂಮಿ ಮಂಜೂರಾತಿಯ ವಿಚಾರ ಮುಖ್ಯಮಂತ್ರಿಗಳಲ್ಲಿ ಚರ್ಚಿಸಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿದೆ. ಎರಡು ಹಂತಗಳಲ್ಲಿ ಸರ್ವೆ ನಡೆದಿದ್ದು, ಎರಡನೇ ಹಂತಗಳಲ್ಲಿ ಕಡಿಮೆ ಭೂಮಿ ಸಾಕಾಗುವ ಕಾರಣ ಆ ಸರ್ವೆ ಒಪ್ಪುವಂತೆ ಬೇಡಿಕೆ ಇಡಲಾಗಿದೆ ಎಂದು ತಿಳಿಸಿದ ಅವರು ಗಾಂಧಿನಗರದಿಂದ ಆಲೆಟ್ಟಿ ಸೇತುವೆ ತನಕ ರಸ್ತೆಯ ಕಾಂಕ್ರಿಟ್‌ಗೆ 20 ಲಕ್ಷ ರೂ. ಇರಿಸಲಾಗಿದೆ. ಈ ವಾರವೇ ಕಾಮಗಾರಿ ಆರಂಭಗೊಳ್ಳಲಿದೆ. ಪೈಚಾರಿನಿಂದ ಸೋಣಂಗೇರಿ ವರೆಗೆ 4.5 ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ವೆಂಕಟ್ ದಂಬೆಕೋಡಿ, ನ.ಪಂ. ಸದಸ್ಯ ವಿನಯ ಕುಮಾರ್ ಕಂದಡ್ಕ, ಸುಬೋಧ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.