ದ.ಕ – 581 ಮಂದಿಯ ಕೊರೋನಾ ವರದಿ ನೆಗೆಟಿವ್, ಉಡುಪಿ-15 , ಕಾಸರಗೋಡು-4 ಪಾಸಿಟಿವ್…
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶುಕ್ರವಾರದಂದು 581 ಮಂದಿಯ ಕೊರೋನಾ ಪರೀಕ್ಷಾ ವರದಿ ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್ ಆಗಿದೆ.
ಇನ್ನು ಶುಕ್ರವಾರದಂದು ಸುಮಾರು 170 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. 593 ಮಂದಿಯ ವರದಿಯನ್ನು ನಿರೀಕ್ಷಿಸಲಾಗಿದೆ. 11 ಮಂದಿಯನ್ನು ಕ್ವಾರಂಟೈನ್ ಕೇಂದ್ರಗಳಿಗೆ ದಾಖಲಿಸಲಾಗಿದೆ.
ಉಡುಪಿಯಲ್ಲಿ ಇಂದು 15 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲವೂ ಮಹಾರಾಷ್ಟ್ರ ರಾಜ್ಯದ ಸಂಪರ್ಕದ್ದಾಗಿದೆ. 6 ಹಾಗೂ 7 ವರ್ಷದ ಬಾಲಕರಿಗೆ ಹಾಗೂ 9 ಮಂದಿ ಪುರುಷರಲ್ಲಿ ಹಾಗೂ 4 ಮಂದಿ ಮಹಿಳೆಯರಿಗೆ ಸೋಂಕು ತಗುಲಿದೆ.
ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 4 ಮಂದಿಯಲ್ಲಿ ಕೋವಿಡ್ ಸೋಂಕು ಖಚಿತಗೊಂಡಿದೆ. ಮಹಾರಾಷ್ಟ್ರ ದಿಂದ ಆಗಮಿಸಿದ್ದ ಪೈವಳಿಕೆ ನಿವಾಸಿ 42 ವರ್ಷದ ವ್ಯಕ್ತಿ, ಬದಿಯಡ್ಕ ನಿವಾಸಿ 63 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿ 31 ವರ್ಷದ ವ್ಯಕ್ತಿ, ದುಬಾಯಿಯಿಂದ ಆಗಮಿಸಿದ 58 ವರ್ಷದ ಉದುಮಾ ನಿವಾಸಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಇನ್ನು ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ ಒಟ್ಟು 248 ಪ್ರಕರಣಗಳು ವರದಿಯಾಗಿವೆ. ಇದು ಇಲ್ಲಿಯವರೆಗೆ ದಾಖಲಾಗಿರುವ ಅತಿ ಹೆಚ್ಚಿನ ಸೋಂಕಿತ ಪ್ರಕರಣಗಳಾಗಿವೆ.ಇವರಲ್ಲಿ 227 ಜನರು ಅಂತಾರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಓರ್ವ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2781ಕ್ಕೇರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 12, ಮಂಡ್ಯದಲ್ಲಿ 2, ಕಲಬುರಗಿಯಲ್ಲಿ 61, ಯಾದಗಿರಿಯಲ್ಲಿ 60, ರಾಯಚೂರಿನಲ್ಲಿ 62, ಉಡುಪಿಯಲ್ಲಿ 15, ದಾವಣಗೆರೆಯಲ್ಲಿ 4, ಹಾಸನದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 5, ಮೈಸೂರಿನಲ್ಲಿ 2, ವಿಜಯಪುರದಲ್ಲಿ 4, ಬಳ್ಳಾರಿಯಲ್ಲಿ 9, ಧಾರವಾಡ, ಚಿತ್ರದುರ್ಗ, ಶಿವಮೊಗ್ಗದಲ್ಲಿ ತಲಾ 1, ತುಮಕೂರಿನಲ್ಲಿ 2, ಚಿಕ್ಕಮಗಳೂರಿನಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 1 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.