ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ವಿರುದ್ಧ ಬಿ.ಸಿ.ರೋಡಿನಲ್ಲಿ ಜನಾಕ್ರೋಶ…
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ತಾಲೂಕಿನ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಆಯೋಜಿಸಿದ ಸಭೆಯಲ್ಲಿ ಸಾರ್ವಜನಿಕ ವಲಯಕ್ಕೆ ದಿನನಿತ್ಯ ಸಮಸ್ಯೆಯನ್ನು ಉಂಟು ಮಾಡುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಪ್ಲಾಜಾ ವಿರುದ್ಧ ಜನಾಕ್ರೋಶ ವ್ಯಕ್ತವಾಯಿತು.
ಇಲ್ಲಿನ ಶ್ರೀರಕ್ತೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ನಡೆದ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಉಮೇಶ್ ಕುಮಾರ್ ವೈ ಅವರು, ಬಿ.ಸಿ.ರೋಡ್, ಬ್ರಹ್ಮರಕೂಟ್ಲು ಟೋಲ್ ಗೇಟ್ ಅವೈಜ್ಞಾನಿಕ ಪದ್ಧತಿಯನ್ನು ಬದಲಾಯಿಸಲು ಸರಕಾರ ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ಮಾರ್ಚ್ 9ರಂದು ಜನಜಾಗೃತಿ ಅಭಿಯಾನ ನಡೆಯಲಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಯಶಸ್ವಿಯಾಗಲಿದೆ ಎಂದರು.
ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಬಿ.ಶೇಖರ್, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆ, ಕೋಶಾಧಿಕಾರಿ ಸುರೇಂದ್ರ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜ ಚೆಂಡ್ತಿಮಾರ್, ಸದಾಶಿವ ಬಂಗೇರ, ಇಬ್ರಾಹಿಂ ಶಂಭೂರು, ಕಳ್ಳಿಗೆ ಗ್ರಾ.ಪಂ. ಸದಸ್ಯ ಮಧುಸೂದನ್ ಶೆಣೈ, ಕಾರು ಚಾಲಕ ಸಂಘದ ಉಪಾಧ್ಯಕ್ಷ ಸುರೇಶ್ ಬಂಗೇರಾ, ವ್ಯಾನು ಚಾಲಕರ ಸಂಘದ ಉಪಾಧ್ಯಕ್ಷ ನಮೇಶ್ ಶೆಟ್ಟಿ, ಸಣ್ಣ ಮತ್ತು ದೊಡ್ಡ ಗೂಡ್ಸ್ ಚಾಲಕರ ಸಂಘ ಸದಸ್ಯ ವರದರಾಜ್, ವಿವಿಧ ಸಂಘಟನೆಗಳ ಪ್ರಮುಖರು ಜಗನ್ನಾಥ ಬಂಟ್ವಾಳ, ಇಬ್ರಾಹಿಂ ಕೈಲಾರ್, ಅಯ್ಯೂಬ್ ಜಿ.ಕೆ.
ರಾಮಣ್ಣ ಮರ್ದೊಳಿ ಮತ್ತಿತರರು ಭಾಗವಹಿಸಿದರು.