ಸತತ 20 ವರ್ಷಗಳಿಂದ ಸಸಿನೆಟ್ಟು ಪೋಷಿಸುತ್ತಿರುವ ಚಂದ್ರಪ್ರಕಾಶ್ ಕೇರ್ಪಳ…
ಆಧುನಿಕ ವೈಜ್ಞಾನಿಕ ಯುಗದಲ್ಲಿ ನಮ್ಮ ಪರಿಸರವನ್ನು ಪ್ರೀತಿಯಿಂದ ಬೆಳೆಸಿ ಮುಂದಿನ ಜನಾಂಗಕ್ಕೆ ಉಳಿಸಿ ಸಂರಕ್ಷಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಸಾಧನೆ ಮಾಡಿರುವ ಸಾಲು ಮರದ ತಿಮ್ಮಕ್ಕ ನಮಗೆಲ್ಲಾ ಆದರ್ಶಪ್ರಾಯವಾಗಿದ್ದಾರೆ. ಅಂತಹುದೇ ಕಾರ್ಯವನ್ನು ಮಾಡುತ್ತಿರುವವರು ಸುಳ್ಯದ ಚಂದ್ರಪ್ರಕಾಶ್ ಕೇರ್ಪಳ.
ಸುಮಾರು 20 ವರ್ಷಗಳಿಂದ ಸಸಿ ನೆಟ್ಟು ತನ್ನ ಸ್ವಂತ ಖರ್ಚಿನಿಂದ ಪೋಷಿಸಿಕೊಂಡು ಬರುತ್ತಿರುವ ವೃಕ್ಷಪ್ರೇಮಿ ಚಂದ್ರಪ್ರಕಾಶ್ ಕೇರ್ಪಳ. ಇವರು ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೇರ್ಪಳ ಕೂಸಪ್ಪ ಗೌಡ, ಯಶೋದಾ ದಂಪತಿಯ ಪುತ್ರ. ಸುಮಾರು 22 ವರ್ಷಗಳಿಂದ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಇವರು ಕಾಲೇಜಿನ ಆವರಣದಲ್ಲಿ ಸಂಸ್ಥೆಯ ಪ್ರೋತ್ಸಾಹದೊಂದಿಗೆ ಹತ್ತಾರು ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಅಲ್ಲದೆ ಸುತ್ತಮುತ್ತಲಲ್ಲಿರುವ ಶಾಲೆ-ಕಾಲೇಜು, ಸರಕಾರಿ ಕಚೇರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ನ್ಯಾಯಾಲಯ, ತಾಲೂಕು ಕಚೇರಿ, ಬಿಆರ್‌ಸಿ ಹಾಗೂ ರಸ್ತೆಬದಿಗಳಲ್ಲಿ ಸಸಿಗಳನ್ನು ನೆಟ್ಟು ಮಾದರಿ ಕಾರ್ಯ ಮಾಡಿದ್ದಾರೆ.
ಇವರು ನೆಟ್ಟು ಪೋಷಿಸಿದ ಗಿಡಗಳು ಇಂದು ಮರವಾಗಿ ಹಣ್ಣುಗಳನ್ನು ನೀಡುತ್ತಿದೆ. ಸಸಿಗಳನ್ನು ನೆಡುವುದು ಮಾತ್ರವಲ್ಲದೆ ನಿರಂತರ 3 ವರ್ಷಗಳ ಕಾಲ ಇದಕ್ಕೆ ಬೇಕಾದ ತಡೆಬೇಲಿ, ನೀರು, ಗೊಬ್ಬರ ಉಣಿಸಿ ಸಂರಕ್ಷಿಸುವ ಕೆಲಸ ಇವರದ್ದಾಗಿರುತ್ತದೆ. ಯಾವುದೇ ಫಲಾಪೇಕ್ಷೆಯನ್ನು ಬಯಸದೆ ತನ್ನ ಈ ಕಾಯಕದಲ್ಲಿ ತೊಡಗಿಕೊಂಡಿರುವ ಇವರಿಗೆ ಗಿಡ ನೆಟ್ಟು ಪೋಷಿಸುವ ಕಾಯಕದಲ್ಲಿ ಪುತ್ರನಾದ ತನಿಷ್ ಸಹಕಾರ ನೀಡುತ್ತಿದ್ದಾರೆ.
ಸಕಲ ಜೀವ ಸಂಕುಲಗಳಿಗೆ ಜೀವನಾಧಾರವಾಗಿರುವ ನಮ್ಮ ಪರಿಸರವನ್ನು ಉಳಿಸಿ ಬೆಳೆಸುವ ಗುರುತರವಾದ ಜವಬ್ದಾರಿ ಪ್ರತಿಯೊಬ್ಬರದು. ಮರಗಳನ್ನು ರಕ್ಷಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಚಂದ್ರಪ್ರಕಾಶ್ ಕೇರ್ಪಳ ಅವರ ಆಶಯ, ಅಭಿಪ್ರಾಯವಾಗಿದೆ.
ಮಾಹಿತಿಕೃಪೆ: ರಿಯಾಜ್ ಕಟ್ಟೆಕ್ಕಾರ್, ಸದಸ್ಯರು, ನ.ಪಂ. ಸುಳ್ಯ