ಎಸ್.ಡಿ.ಪಿ.ಐ.ರಾಜಕೀಯ ಬದ್ಧತೆಯಿಲ್ಲದ ಪಕ್ಷ, ಅದರ ಗುರಿ ಕಾಂಗ್ರೆಸ್ ಸೋಲಿಸುವುದು ಮಾತ್ರ – ಶೌವಾದ್ ಗೂನಡ್ಕ…
ಸುಳ್ಯ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿ ಪರೋಕ್ಷವಾಗಿ ಬಿ.ಜೆ.ಪಿ.ಗೆಲುವಿಗೆ ಸಹಕರಿಸುತ್ತಿರುವ ಎಸ್.ಡಿ.ಪಿ.ಐ.ಪಕ್ಷಕ್ಕೆ ಯಾವುದೇ ರಾಜಕೀಯ ಬದ್ಧತೆಯಿಲ್ಲ, ಒಂದು ಕಡೆ ಮುಸಲ್ಮಾನರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ ಎನ್ನುತ್ತಾರೆ, ಮತ್ತೊಂದು ಕಡೆ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಮುಸ್ಲಿಂ ಅಭ್ಯರ್ಥಿಗಳ ವಿರುದ್ಧವೇ ಇವರು ಅಭ್ಯರ್ಥಿಗಳನ್ನು ಹಾಕುತ್ತಾರೆ. ಇದರಿಂದಲೇ ಎಸ್.ಡಿ.ಪಿ.ಐ.ಒಂದು ಸ್ವಂತ ನಿಲುವಿಲ್ಲದ ಪಕ್ಷವೆಂದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಕೇವಲ ಮುಸ್ಲಿಂ ಮತ ವಿಭಜನೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಮಾತ್ರ ಇವರ ಉದ್ದೇಶವೇ ಹೊರತು ಬೇರೆನಿಲ್ಲವೆಂದು ಕೆ.ಪಿ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕ ಹೇಳಿದ್ದಾರೆ.
ಪ್ರಸ್ತುತ ತೊಂದರೆಗೊಳಗಾಗಿರುವ ಮುಸ್ಲಿಂ ಸಮುದಾಯಕ್ಕೆ ಬೆಂಗಾವಲಾಗಿ ನಿಲ್ಲಲು ಸರ್ವಧರ್ಮವನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ, ಧರ್ಮಗಳ ನಡುವೆ ವಿಷಬೀಜವನ್ನು ಬಿತ್ತಿ ಮತ ಯಾಚಿಸುವ ಬಿ.ಜೆ.ಪಿ.ಹಾಗೂ ಎಸ್.ಡಿ.ಪಿ.ಐ.ಪ್ರಜಾಪ್ರಭುತ್ವಕ್ಕೆ ಮಾರಕವೆಂದು ಅವರು ತಿಳಿಸಿದ್ದಾರೆ.
ಬಿ.ಜೆ.ಪಿ.ಹಾಗೂ ಎಸ್.ಡಿ.ಪಿ.ಐ.ಖಾಸಾ ದೋಸ್ತ್ ಗಳು “ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು” ಎಂದು ಇವರ ಒಪ್ಪಂದವಾಗಿದೆ. ಪ್ರಸ್ತುತ ಮುಸ್ಲಿಂ ಸಮುದಾಯದ ಹಲವು ಸಮಸ್ಯೆಗಳಿಗೆ ಒಂದು ದಿನದ ಪ್ರತಿಭಟನೆಗಳಿಂದ, ಪತ್ರಿಕಾಗೋಷ್ಠಿಗಳಿಂದ ಪರಿಹಾರ ಸಿಗಲು ಸಾಧ್ಯವಿಲ್ಲ, ಇದಕ್ಕೆಲ್ಲ ಸರ್ಕಾರದ ಮಟ್ಟದಲ್ಲೇ ಪರಿಹಾರ ಸಿಗಬೇಕಾಗಿದೆ, ಆದ್ದರಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಪ್ರಸ್ತುತ ಸರ್ಕಾರ ರಚಿಸಲು ತಾಕತ್ತಿರುವ ಏಕೈಕ ಜಾತ್ಯಾತೀತ ಪಕ್ಷ ಕಾಂಗ್ರೆಸ್ ಮಾತ್ರ, ಒಂದೇ ಒಂದು ಶಾಸಕ ಸ್ಥಾನವು ಹೊಂದಿಲ್ಲದ ಎಸ್.ಡಿ.ಪಿ.ಐ.ಯಂತಹ ಪಕ್ಷಗಳಿಂದ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವೇ ಇಲ್ಲ, ಇದನ್ನು ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಶೌವಾದ್ ಗೂನಡ್ಕರವರು ಮನವಿ ಮಾಡಿದ್ದಾರೆ.