ನೂತನ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ವೀಕ್ಷಣಾ ತಂಡ…
ಬಂಟ್ವಾಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಯಾದ ಶ್ರೀ ಪೂರಣ್ ವರ್ಮ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಇವರು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆ,ಮಾಣಿ -ಬಂಟ್ವಾಳ ತಾಲೂಕು ಇದರ ವಿಸ್ತೃತ ನೂತನ ವಿದ್ಯಾಲಯಕ್ಕೆ ಜೂ. 10 ರಂದು ಭೇಟಿ ನೀಡಿದರು.
ನೂತನ ಶಿಕ್ಷಣ ಸಂಸ್ಥೆಯ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಲಾದ ಆಧುನಿಕ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸಿ ವಿವಿಧ ಮಾಹಿತಿಯನ್ನು ಪಡೆದುಕೊಂಡರು. ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಸ್ಥಾಪಕರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆ. ಪ್ರಹ್ಲಾದ ಶೆಟ್ಟಿ ಸ್ವಾಗತಿಸಿ, ಶಾಲೆಯ ವಿವಿಧ ಸೌಕರ್ಯಗಳಾದ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ, ವಿಶಾಲವಾದ ಕ್ರೀಡಾಂಗಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಸಭಾಂಗಣ, ಜಿಪಿಎಸ್ ಅಳವಡಿಸಿರುವ ಶಾಲಾ ಬಸ್ ನ ವ್ಯವಸ್ಥೆ, ಪ್ರತೀ ತರಗತಿ ಸೇರಿದಂತೆ 75 ಹೆಚ್ಚು ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿರುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೂರಣ್ ವರ್ಮರು, ಶ್ರದ್ಧೆ ಮತ್ತು ಆಸಕ್ತಿಯಿಂದ ನಿರಂತರವಾಗಿ ಅಭ್ಯಾಸ ಮಾಡಿದಾಗ ಶಿಕ್ಷಣದಲ್ಲಿ ಸಾಧನೆ ಸಾಧ್ಯವಾಗುತ್ತದೆ ಎಂಬುದನ್ನು ಕಥೆಯ ಮೂಲಕ ವಿದ್ಯಾರ್ಥಿಗಳು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಹೇಳಿದರು. ಶಾಲೆಯ ಪರಿಸರ, ಶಿಕ್ಷಣ ವ್ಯವಸ್ಥೆ , ವಿದ್ಯಾರ್ಥಿಗಳ ಶಿಸ್ತು ಹಾಗೂ ಆಡಳಿತ ಮಂಡಳಿಯವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯನ್ನು ಕೂಡ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾದ ಮಹೇಶ ಜೆ. ಶೆಟ್ಟಿಯವರು ಎಲ್ಲಾ ತರಗತಿ ಕೊಠಡಿಗಳಲ್ಲಿ ಅಳವಡಿಸಿರುವ ಸ್ಮಾರ್ಟ್ ಬೋರ್ಡ್ ಹಾಗೂ ಎಲ್ ಕೆ ಜಿ ಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳ ಚಟುವಟಿಕೆಯಾಧಾರಿತ ಕಲಿಕೆಗೆ ಪೂರಕವಾಗುವ ವಿವಿಧ ಆಟಿಕೆಗಳು ಮತ್ತು ಮಾದರಿಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಆಶ್ರಯ ಅಜ್ರಿ, ಮುಖ್ಯ ಶಿಕ್ಷಕಿ ಹೇಮಲತಾ, ಶಿಕ್ಷಕಿ ಅಮಿತಾ, ಜಯಾನಂದ ಪೆರಾಜೆ ವೀಕ್ಷಣಾ ತಂಡದಲ್ಲಿದ್ದರು. ಈ ಸಂದರ್ಭದಲ್ಲಿ ಬಾಲವಿಕಾಸ ಸಂಸ್ಥೆಯ ಶ್ರೀಮತಿ ನಮ್ರತಾ ರೈ, ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ ಶೆಟ್ಟಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.