“ಭವಿಷ್ಯಕ್ಕಾಗಿ ಒಂದು ಗಿಡ” – ಸಹ್ಯಾದ್ರಿ ಕಾಲೇಜಿನಲ್ಲಿವಿಶಿಷ್ಟ ಬೀಳ್ಕೊಡುಗೆ ಕಾರ್ಯಕ್ರಮ…
ಮಂಗಳೂರು: ಮಂಗಳೂರಿನ ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ನ 2022-24ನೇ ಎಂಬಿಎ ತಂಡವನ್ನು ಕಿರಿಯ ಎಂಬಿಎ ವಿದ್ಯಾರ್ಥಿಗಳು ವಿಶಿಷ್ಟವಾಗಿ ಇತ್ತೀಚಿಗೆ ಬೀಳ್ಕೊಟ್ಟರು.
ಭವಿಷ್ಯಕ್ಕಾಗಿ ಒಂದು ಗಿಡ ಎಂಬ ಧ್ಯೇಯ ವಾಕ್ಯದೊಂದಿಗೆ ಹಿರಿಯ- ಕಿರಿಯ ವಿದ್ಯಾರ್ಥಿಗಳು ವ್ಯಕ್ತಿಗೊಂದು ಗಿಡವೆಂಬಂತೆ ವಿವಿಧ ಬೀಜಗಳನ್ನು ಬಿತ್ತುವ ಮುಖಾಂತರ ಮುಂದಿನ ಪೀಳಿಗೆಗಾಗಿ ಒಂದೊಂದು ಗಿಡವನ್ನು ನೆಡುವ ಕಾರ್ಯಕ್ರಮ ಮಾಡಲಾಯಿತು. ಬೀಳ್ಕೊಡುಗೆ ಎನ್ನುವುದು ಕೇವಲ ಡ್ಯಾನ್ಸ್ ಗಳಿಗೆ ಸೀಮಿತವಾಗದೆ ವಿಶಿಷ್ಟವಾದ ಧ್ಯೇಯದೊಂದಿಗೆ ಈ ಕಾರ್ಯಕ್ರಮ ನಡೆಸಿರುವುದು ವಿದ್ಯಾರ್ಥಿಗಳಲ್ಲಿ ಬೆಳೆದಿರುವ ಹೊಸ ಚಿಂತನೆಯಾಗಿದೆ.
ಸಹ್ಯಾದ್ರಿ ಕಾಲೇಜಿನ ಟ್ರಸ್ಟಿಯಾಗಿರುವ ಶ್ರೀ ದೇವದಾಸ್ ಹೆಗ್ಡೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 300 ವಿವಿಧ ಬೀಜಗಳನ್ನು ಬಿತ್ತಲಾಯಿತು. ಈ ಕಾರ್ಯಕ್ರಮವನ್ನು Northernsky Properties Pvt Ltd. ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಕೃತಿನ್ ಅಮೀನ್ ಇವರು ಬೀಜ ಬಿತ್ತುವ ಮುಖಾಂತರ ಉದ್ಘಾಟಿಸಿದರು.
ಎಂಬಿಎ ವಿಭಾಗದ ನಿರ್ದೇಶಕರಾದ ಡಾಕ್ಟರ್ ವಿಶಾಲ್ ಸಮರ್ಥ, ವಿದ್ಯಾರ್ಥಿ ಸಂಘಟನೆಯ ಸಂಯೋಜಕರಾದ ಪ್ರೊ. ಪದ್ಮನಾಭ, ಕಾಲೇಜಿನ ಕಾರ್ಯತಂತ್ರ ಯೋಜನಾ ಡೀನ್ ಪ್ರೊ. ರಮೇಶ್ ಕೆ ಜಿ ಹಾಗೂ ಇತರ ಉಪನ್ಯಾಸಕ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಲ್ಲಿ ಬೆಳೆದ ಗಿಡಗಳನ್ನು ಮುಂದಿನ ವರ್ಷ ಬೇರೆ ಬೇರೆ ಸ್ಥಳಗಳಲ್ಲಿ ನೆಡುವ ಜವಾಬ್ದಾರಿಯನ್ನು ಕಿರಿಯ ವಿದ್ಯಾರ್ಥಿಗಳಿಗೆ ವಹಿಸಲಾಗುವುದು. ಈ ಮೂಲಕ ಹೊಸ ಸಸ್ಯಕ್ರಾಂತಿಯನ್ನು ಸಹ್ಯಾದ್ರಿಯ ಎಂಬಿಎ ವಿದ್ಯಾರ್ಥಿಗಳು ಆರಂಭಿಸಿದ್ದಾರೆ.