ಹೊಸ ಶಿಕ್ಷಣ ನೀತಿಯ ಭವಿಷ್ಯ ಶಿಕ್ಷಕರ ಕೈಯಲ್ಲಿದೆ – ಜ್ಞಾನೇಶ್…
ಬಂಟ್ವಾಳ: ಹೊಸ ಶಿಕ್ಷಣ ನೀತಿಯ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಶ್ರದ್ಧೆಯಿಂದ ಪ್ರಾಮಾಣೀಕತೆಯಿಂದ ಹೊಸ ಶಿಕ್ಷಣ ನೀತಿಯ ಪರಿಕಲ್ಪನೆಯನ್ನು ಸಹಕಾರಗೊಳಿಸಬೇಕು. ಹೊಸ ಶಿಕ್ಷಣ ಪದ್ಧತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕರಾತ್ಮಕ ಬದಲಾವಣೆಯಾಗಲಿದೆ. ಭಾರತೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಜವಾಬ್ದಾರಿಯನ್ನು ಶಿಕ್ಷಕರು ಸಮರ್ಥವಾಗಿ ನಿರ್ವಹಿಸಬೇಕಾಗಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಮ್.ಪಿ. ಹೇಳಿದರು.
ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನು ಶನಿವಾರ ಸಹಕಾರಿ ನೌಕರರ ಸಭಾಭವನ ಬಿ.ಸಿ.ರೋಡಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸರಕಾರಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರಿ ನೌಕರರ ಸಂಘವು ಯಶಸ್ವಿಯಾಗಿದೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪಿಂಚಣಿದಾರರ ಸಂಘದ ಅಧ್ಯಕ್ಷ ಲಯನ್ ಪಿ. ಲೋಕನಾಥ ಶೆಟ್ಟಿ ,ವಿಮಲ್ ಕುಮಾರ್ ನೆಲ್ಯಾಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಶುಭ ಹಾರೈಸಿ ಮಾತನಾಡಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ ಕಾನೂನು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಉಪಯುಕ್ತ ಕಾನೂನು ಮಾಹಿತಿ ನೀಡಿದರು. ಜಿಲ್ಲಾ ಹಾಗೂ ತಾಲೂಕು ಪ್ರಶಸ್ತಿ ವಿಜೇತ ನಿವೃತ್ತ ಸರಕಾರಿ ನೌಕರರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಿ ಪುರಸ್ಕರಿಸಲಾಯಿತು.
ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ವಿಶೇಷ ಆಹ್ವಾನಿತರಾಗಿ ಗೌರವಿಸಲ್ಪಟ್ಟರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ಬಸಯ್ಯ್ ಅಲಿಮಟ್ಟಿ, ಉಪಾಧ್ಯಕ್ಷರುಗಳಾದ ಶಮಂತ್ ಕುಮಾರ್ , ಮಂಜುನಾಥ ಕೆ. ಹೆಚ್, ತೀರ್ಥರಾಮ ಸುಳ್ಯ, ರಮೇಶ್ ನಾಯಕ್, ಶ್ರೀಮತಿ ಸುಜಾತ ಮೊದಲಾದವರು ಉಪಸ್ಥಿತರಿದ್ದರು.