ಬೊಂಡಾಲದ ಆಟ – ಚಿನ್ನದ ನೋಟ…

ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಕಳೆದ ಐದು ದಶಕಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟಕ್ಕೆ ಇದೀಗ ಸುವರ್ಣ ಸಂಭ್ರಮ. ಈ ಚಿನ್ನದ ನೋಟದ ಹಿಂದೆ ಊರವರ ಭಕ್ತಿ-ಶ್ರದ್ಧೆಗಳ ಭಾವನಾತ್ಮಕವಾದ ಬೆಸುಗೆ ಇದೆ. ಹಳೆಯ ತಲೆಮಾರಿನ ಹಿರಿಯ ಅರ್ಥಧಾರಿ,ಶಿಕ್ಷಕ ಮತ್ತು ಊರಿನ ಪಟೇಲರಾಗಿದ್ದ ಬೊಂಡಾಲ ಜನಾರ್ದನ ಶೆಟ್ಟಿಯವರ ದಕ್ಷ ನಾಯಕತ್ವದಲ್ಲಿ ಇದು ಸಾಗಿ ಬಂದಿದೆ. ಅವರೊಂದಿಗೆ ಬೊಂಡಾಲದ ಅನೇಕ ಹಿರಿಯರು ಮತ್ತು ಉತ್ಸಾಹೀ ತರುಣರು ಕೈಜೋಡಿಸಿ ಈ ಸುವರ್ಣ ಪಥದಲ್ಲಿ ದಾರಿದೀವಿಗೆಗಳಾಗಿ ಕೆಲಸ ಮಾಡಿರುವುದು ಕಂಡುಬರುತ್ತದೆ.
ಬೊಂಡಾಲದ ಬಯಲಾಟವೆಂದರೆ ಊರವರನ್ನು ಒಂದುಗೂಡಿಸುವ ದೊಡ್ಡ ಹಬ್ಬ. ಈ ಸಂದರ್ಭದಲ್ಲಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಯಜಮಾನರು, ಕಲಾವಿದರು ಮತ್ತು ಹಿಮ್ಮೇಳದವರನ್ನು ಸನ್ಮಾನಿಸುವ ಪರಂಪರೆಯೂ ಬೆಳೆದು ಬಂತು. ದಿ. ಕಲ್ಲಾಡಿ ವಿಠಲಶೆಟ್ಟಿ,ಇರಾ ಗೋಪಾಲಕೃಷ್ಣ ಭಾಗವತ, ಬಲಿಪ ನಾರಾಯಣ ಭಾಗವತ, ಕಂಡೇರಿ ಕೊರಗಪ್ಪ ನಾಯ್ಕ, ಕುಬನೂರು ಶ್ರೀಧರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಪ್ರಸಾದ್ ಬಲಿಪ ಮೊದಲಾದ ಮಹನೀಯರು ಬೊಂಡಾಲದ ಆಟದಲ್ಲಿ ಸನ್ಮಾನಿತರಾಗಿದ್ದಾರೆ. ಜನಾರ್ದನ ಶೆಟ್ಟರ ನಿಧನಾ ನಂತರ ಅವರ ಪುತ್ರ, ಭೂಮಾಪನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹವ್ಯಾಸಿ ಯಕ್ಷಗಾನ ಕಲಾವಿದ ಬೊಂಡಾಲ ರಾಮಣ್ಣ ಶೆಟ್ಟಿ ಈ ಪರಂಪರೆಯನ್ನು ಮುಂದುವರಿಸಿದರು. ಕಲಾವಿದರ ಸನ್ಮಾನದ ಜೊತೆಗೆ ದಿ. ಬೊಂಡಾಲ ಜನಾರ್ಧನ ಶೆಟ್ಟಿ ಅವರ ಸ್ಮರಣಾರ್ಥ ಪ್ರತಿ ವರ್ಷ ‘ ಬೊಂಡಾಲ ಪ್ರಶಸ್ತಿ ಪ್ರದಾನ’ದ ಹೊಸ ಉಪಕ್ರಮ ಪ್ರಾರಂಭವಾಯಿತು. ಇದನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದವರು ರಾಮಣ್ಣ ಶೆಟ್ಟರ ಹಿರಿಯ ಪುತ್ರ, ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟರು.
ಈವರೆಗೆ ಸರಿಸುಮಾರು 30 ಮಂದಿ ಕಲಾವಿದರಿಗೆ ಬೊಂಡಾಲ ಪ್ರಶಸ್ತಿ ಸಂದಿದೆ. ಇದು ಕಟೀಲು ಮೇಳದಲ್ಲಿ ದುಡಿದ ಕಲಾವಿದರು ಮತ್ತು ನೇಪಥ್ಯ ಕೆಲಸಗಾರರಿಗೆ ಮಾತ್ರ ಸೀಮಿತವಾಗಿದ್ದ ಪ್ರಶಸ್ತಿ. ರಾಮಣ್ಣ ಶೆಟ್ಟರ ಮರಣದ ಬಳಿಕ ‘ಬೊಂಡಾಲ ಜನಾರ್ದನ ಶೆಟ್ಟಿ – ರಾಮಣ್ಣ ಶೆಟ್ಟಿ ಸ್ಮಾರಕ ಪ್ರಶಸ್ತಿ’ ಎಂಬ ಹೆಸರಿನಲ್ಲಿ ಸಚ್ಚಿದಾನಂದ ಶೆಟ್ಟರು ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ.

ಸಾಧಕರ ಸಮ್ಮಾನ:
ಇದೀಗ 2024 ಫೆಬ್ರವರಿ 14,15 ಮತ್ತು 16ರಂದು ಬೊಂಡಾಲ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ಆಶ್ರಯದಲ್ಲಿ ಮೂರು ದಿನಗಳ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಟೀಲು ಮೇಳದಿಂದ ಕ್ರಮವಾಗಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀ ದೇವಿ ಲಲಿತೋಪಖ್ಯಾನ ಮತ್ತು ಶ್ರೀ ದೇವಿ ಮಹಾತ್ಮೆ – ಹೀಗೆ 3 ಬಯಲಾಟಗಳು ಈ ವೇಳೆ ನಡೆಯಲಿವೆ. ಅಲ್ಲದೆ ಬೊಂಡಾಲ ಯಕ್ಷೋತ್ಸವದ ವಿಶೇಷ ಕಾರ್ಯಕ್ರಮವಾಗಿ ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾಲಿಗ್ರಾಮ ಸಹಿತ ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆಯವರನ್ನು ಸುವರ್ಣೋತ್ಸವ ಗೌರವ ನೀಡಿ ಗೌರವಿಸಲಾಗುವುದು

ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ:

whatsapp image 2024 01 20 at 7.46.52 pm

ಕಲ್ಲಾಡಿ ಮನೆತನದ ಹಿರಿಯರಾದ ಕಲ್ಲಾಡಿ ದಿ| ಕೊರಗ ಶೆಟ್ಟಿ ಮತ್ತು ದಿ| ವಿಠಲ ಶೆಟ್ಟಿಯವರ ಯಜಮಾನಿಕೆಯಲ್ಲಿ 1937ರಿಂದ 2005ರವರೆಗೆ ತಿರುಗಾಟ ನಡೆಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕತ್ವವನ್ನು 2005 ರಿಂದ ಸಮಗ್ರವಾಗಿ ನಿರ್ವಹಿಸಿಕೊಂಡು ಬರುತ್ತಿರುವವರು ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ. ಕಲ್ಲಾಡಿ ವಿಠಲಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ದಂಪತಿಗೆ 1955 ಏಪ್ರಿಲ್ 27ರಂದು ಜನಿಸಿದ ದೇವಿ ಪ್ರಸಾದ್ ಶೆಟ್ಟಿ ಅವರು ತಂದೆಯವರ ಬಳಿಕ ಕರ್ನಾಟಕ ಮೇಳವನ್ನು ಮುನ್ನಡೆಸಿದರು. ಅದು ಸ್ಥಗಿತಗೊಂಡ ಬಳಿಕ ನಾಲ್ಕಾಗಿದ್ದ ಕಟೀಲು ಮೇಳವನ್ನು ಆರಕ್ಕೇರಿಸಿದರು. ಕಲ್ಲಾಡಿ ಮನೆತನದ ಮೂರನೇ ತಲೆಮಾರಿನ ಪ್ರತಿನಿಧಿಯಾಗಿ ಅವರನ್ನು ಸೇವಾಕರ್ತರು ಆದರದಿಂದ ‘ಕೊರಗಣ್ಣ’ ಎಂದೇ ಕರೆಯುತ್ತಾರೆ.

ಶ್ರೀ ಕಟೀಲು ಕ್ಷೇತ್ರದ ಭಕ್ತರು ಮತ್ತು ಹಿತೈಷಿಗಳ ಸಹಕಾರದಿಂದ ಕಲಾವಿದರ ಸಂಚಾರಕ್ಕೆ ಬಸ್ಸಿನ ವ್ಯವಸ್ಥೆ, ಪರಿಕರಗಳ ಸಾಗಣಿಕೆಗೆ ಲಾರಿಗಳು, ಸೇವಾಕರ್ತರ ಅನುಕೂಲಕ್ಕಾಗಿ ಸಿದ್ಧರಂಗಸ್ಥಳ, ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆಗಳನ್ನು ಮೇಳದಲ್ಲಿಯೇ ಮಾಡಿಕೊಟ್ಟಿದ್ದಾರೆ. ಕಟೀಲು ಆರು ಮೇಳಗಳ 300 – 350 ಕಲಾವಿದರಿಗೆ ಮಳೆಗಾಲದ ರಜಾ ಸಂಬಳ ದೊರೆಯುವ ಕಾರ್ಯ ಯೋಜನೆಯನ್ನು ರೂಪಿಸಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಸಮರ್ಥ ಯಜಮಾನಿಕೆ ಕೊರಗಣ್ಣನದು. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ 2015 ರಲ್ಲಿ ದೇವಳದ ಬ್ರಹ್ಮಕಲಶೋತ್ಸವವನ್ನು ಅದ್ದೂರಿಯಾಗಿ ನಡೆಸಿರುವ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.
ಧರ್ಮಪತ್ನಿ ಅನುಪಮಾ ಅವರೊಂದಿಗಿನ ದಾಂಪತ್ಯದಲ್ಲಿ ಎರಡು ಗಂಡು ಮತ್ತು ಒಬ್ಬಾಕೆ ಹೆಣ್ಣು ಮಗಳನ್ನು ಪಡೆದಿರುವ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಅವರದು ಸಂತೃಪ್ತ ಜೀವನ.

ಪಳ್ಳಿ ಕಿಶನ್ ಹೆಗ್ಡೆ:

whatsapp image 2024 01 20 at 7.47.12 pm

ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮೋ ಪದವೀಧರರಾದ ಪಳ್ಳಿ ಕಿಶನ್ ಹೆಗ್ಡೆ ಅವರು ಸಾಲಿಗ್ರಾಮ ಮೇಳದ ಸಂಚಾಲಕರಾಗಿದ್ದ ಪಳ್ಳಿ ಸೋಮನಾಥ ಹೆಗ್ಡೆ ಮತ್ತು ಪ್ರಫುಲ್ಲ ಎಸ್. ಹೆಗ್ಡೆಯವರ ನಾಲ್ಕು ಮಕ್ಕಳಲ್ಲಿ ಹಿರಿಯರು. 1986 ರಲ್ಲಿ ಸೋಮನಾಥ ಹೆಗ್ಡೆಯವರು ನಿಧನರಾದಾಗ ಸಾಲಿಗ್ರಾಮ ಮೇಳವನ್ನು ಮುನ್ನಡೆಸುವ ಹೊಣೆ ಅನಿವಾರ್ಯವಾಗಿ ಕಿಶನ್ ಹೆಗಲಿಗೇರಿತು. ಆಗ 20ರ ಹರೆಯದ ಅವರಿಗೆ ಚಿಕ್ಕಪ್ಪ ಪಳ್ಳಿ ಶ್ರೀನಿವಾಸ ಹೆಗಡೆ ಮಾರ್ಗದರ್ಶಕರಾಗಿದ್ದರು. ಸಾಲಿಗ್ರಾಮ, ಸೌಕೂರು, ಹಿರಿಯಡ್ಕ, ಮಡಾಮಕ್ಕಿ, ಬಚ್ಚಗಾರು, ಹಾಲಾಡಿ, ಮೇಗರವಳ್ಳಿ ಹಾಗೂ ತೆಂಕುತಿಟ್ಟಿನ ಕರ್ನಾಟಕ ಮತ್ತು ಮಂಗಳಾದೇವಿ ಹೀಗೆ 9 ಮೇಳಗಳನ್ನು ನಡೆಸಿದ ಅವರು ಪ್ರಸ್ತುತ ಪಂಚ ಮೇಳಗಳ ಸಂಚಾಲಕರಾಗಿದ್ದಾರೆ.
ಎಲ್ಲಾ ಮೇಳಗಳಲ್ಲಿ ಅರ್ಧಚಂದ್ರಾಕೃತಿಯ ರಂಗಮಂಟಪ, ವರ್ಷಂಪ್ರತಿ ಕರ್ನಾಟಕದಾದ್ಯಂತ 1000ಕ್ಕೂ ಮಿಕ್ಕಿ ಪ್ರದರ್ಶನ, ತೆಂಕು – ಬಡಗು ತಿಟ್ಟುಗಳ ಏಕಕಾಲದ ಪ್ರದರ್ಶನ, ಮಳೆಗಾಲದ ಆಟ, ಜೋಡಾಟ – ಕೂಡಾಟಗಳ ಆಯೋಜನೆ.. ಇತ್ಯಾದಿ ಅವರ ಸಾಧನೆ. ಕೋವಿಡ್ ಸಂದರ್ಭ 1000ಕ್ಕೂ ಮಿಕ್ಕಿ ಕಲಾವಿದರಿಗೆ ಮತ್ತು ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆ; ಸೋಮನಾಥ ಯಕ್ಷಕಲಾ ಗಂಗೋತ್ರಿ ಟ್ರಸ್ಟ್ ಸ್ಥಾಪಿಸಿ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಪ್ರಶಸ್ತಿ , ನಿಧಿ ಸಮರ್ಪಣೆ .. ಮೊದಲಾದುವು ಅವರ ಸೇವಾ ಕಾರ್ಯಗಳು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರಾಗಿ, ಉಡುಪಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾಗಿ, ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ – 2023 ಇದರ ಪ್ರಧಾನ ಸಂಚಾಲಕರಾಗಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಮತ್ತು ರಂಗಸ್ಥಳ ಸಾಂಸ್ಕೃತಿಕ ಸಂಶೋಧನಾ ಟ್ರಸ್ಟ್ ಅಧ್ಯಕ್ಷರಾಗಿ ಸಾರ್ವಜನಿಕ ರಂಗದಲ್ಲಿ ದುಡಿದಿರುವ ಪಿ.ಕಿಶನ್ ಹೆಗ್ಡೆಯವರು ಯಕ್ಷಗಾನದಲ್ಲಿ ಹಲವು ಪ್ರಯೋಗಗಳನ್ನು ಮಾಡಿದ ಸಾಹಸಿ.
ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಿಕಟ ಪೂರ್ವ ಆಡಳಿತ ಮೊಕ್ತೇಸರರಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ್ದ ಅವರು ದೇವಳದ ಬ್ರಹ್ಮಕಲಶೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದರು. ಪತ್ನಿ ಶಿಲ್ಪ ಹೆಗಡೆ, ಮಕ್ಕಳಾದ ತನಿಷ್ಕ್ ಮತ್ತು ಕಶಿಸ್ ಅವರೊಂದಿಗೆ ಬೈಲೂರಿನ ‘ಸೋಮನಾಥ್’ ತೋಟದ ಮನೆಯಲ್ಲಿ ಕಿಶನ್ ಹೆಗ್ಡೆ ಸುಖೀ ಜೀವನ ನಡೆಸುತ್ತಿದ್ದಾರೆ.

ಅಮ್ಮುಂಜೆ ಮೋಹನ್ ಕುಮಾರ್ ಗೆ ಪ್ರಶಸ್ತಿ:

whatsapp image 2024 01 20 at 7.47.37 pm

ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ ‘ಬೊಂಡಾಲ ಪ್ರಶಸ್ತಿ’ಗೆ ಈ ಬಾರಿ ಆಯ್ಕೆಯಾದವರು ಕಟೀಲು ಮೇಳದ ಖ್ಯಾತ ವೇಷಧಾರಿ ಮೋಹನ್ ಕುಮಾರ್ ಅಮ್ಮುಂಜೆ.
ಬಟ್ಲಬೆಟ್ಟು ಅಮ್ಮುಂಜೆಯ ದಿ| ವೆಂಕಪ್ಪ ಬೆಳ್ಚಡ ಮತ್ತು ದಿ| ಸುಶೀಲಾ ದಂಪತಿಗೆ 1973 ಜುಲೈ 4ರಂದು ಜನಿಸಿದ ಮೋಹನ್ ಕುಮಾರ್ ಎಸ್.ಎಸ್.ಎಲ್.ಸಿ. ವರೆಗೆ ಓದಿದ್ದಾರೆ. ಗುಂಡಿಲಗುತ್ತು ಶಂಕರ ಶೆಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆಯನ್ನು ಕಲಿತ ಅವರು 1991ರಲ್ಲಿ ಯಕ್ಷಗಾನ ರಂಗಕ್ಕೆ ಬಂದರು. ಮುಂದೆ ಪಡ್ರೆ ಚಂದು ಅವರಿಂದಲೂ ನಾಟ್ಯಾಭ್ಯಾಸ ಮಾಡಿ ಬಳಿಕ ಶ್ರೀ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರ ಸೇರಿ ಕೋಳ್ಯೂರು ರಾಮಚಂದ್ರ ರಾಯರಿಂದ ಎಲ್ಲಾ ಬಗೆಯ ನೃತ್ಯಗಳಲ್ಲಿ ಪರಿಣತಿ ಗಳಿಸಿದರು.
ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿ ರಂಗ ಪ್ರವೇಶ ಮಾಡಿದ ಮೋಹನ್ ಕಟೀಲು ಮೇಳದಲ್ಲಿ 29 ವರ್ಷ, ಎಡನೀರು ಮೇಳದಲ್ಲಿ ಎರಡು ವರ್ಷ, ಬಪ್ಪನಾಡಿನಲ್ಲಿ ಒಂದು ವರ್ಷ ಸೇರಿದಂತೆ ಒಟ್ಟು 32 ವರ್ಷಗಳ ತಿರುಗಾಟ ನಡೆಸಿದ್ದಾರೆ. ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ ಮುಂಡರು, ವಿಷ್ಣು, ಶ್ರೀಕೃಷ್ಣ, ಹಿರಣ್ಯಾಕ್ಷ, ಶಿಶುಪಾಲ, ದಕ್ಷ, ಋತುಪರ್ಣ, ಜಾಂಬವ, ಅಶ್ವತ್ಥಾಮ, ಶಶಿಪ್ರಭೆ, ಭ್ರಮರ ಕುಂತಳೆ ಇತ್ಯಾದಿ ಪಾತ್ರಗಳಲ್ಲಿ ಗಮನ ಸೆಳೆದ ಅವರು ಪ್ರಸ್ತುತ ಕಟೀಲು ಮೇಳದಲ್ಲಿ ದೇವಿ ಮಹಾತ್ಮೆಯ ರಕ್ತಬೀಜನಾಗಿ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಕದ್ರಿ ವಿಷ್ಣು ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ ಗೌರವ ಪಡೆದಿರುವ ಅಮ್ಮುಂಜೆ ಮೋಹನ್ ಕುಮಾರ್ ಪತ್ನಿ ಶಶಿಕಲಾ ಹಾಗೂ ಮಕ್ಕಳಾದ ವೈಶಾಖ ಮತ್ತು ವೈಷ್ಣವಿ ಅವರೊಂದಿಗೆ ಬಟ್ಲಬೆಟ್ಟು ‘ಕೌಸ್ತುಭಾ’ದಲ್ಲಿ ವಾಸವಾಗಿದ್ದಾರೆ.
ಬೊಂಡಾಲ ಪ್ರಶಸ್ತಿಯು ರೂ. 10,000/- ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ಫೆಬ್ರವರಿ 15ರಂದು ‘ಬಯಲಾಟದ ಸುವರ್ಣ ಸಂಭ್ರಮ’ ವೇದಿಕೆಯಲ್ಲಿ ಸಾಧಕ ಸಮ್ಮಾನ, ಬಯಲಾಟ ಸುವರ್ಣ ಯಾನದಲ್ಲಿ ಕೈಜೋಡಿಸಿದ ಹಿರಿಯರ ಮನೆಯವರಿಗೆ ಗೌರವಾರ್ಪಣೆ ಮತ್ತು ಬೊಂಡಾಲ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಏಕ ಕಾಲದಲ್ಲಿ ನಡೆಯಲಿವೆ.
ಲೇ:ಭಾಸ್ಕರ ರೈ ಕುಕ್ಕುವಳ್ಳಿ

Sponsors

Related Articles

Back to top button