ಪ್ರಾಥಮಿಕ ಹಾಗೂ ಪ್ರೌಡಶಾಲೆಗಳನ್ನು ತೆರೆಯುವುದು ಸರಿಯೆ?…ಶ್ರೀನಾಥ್ ಆಲೆಟ್ಟಿಯವರಿಂದ ಶಿಕ್ಷಣ ಮಂತ್ರಿಗಳಿಗೆ ಮನವಿ…

ಸುಳ್ಯ: ಸುಳ್ಯದ ಸ್ಪೀಡ್ ಕಂಪ್ಯೂಟರ್ಸ್ ನ ಮಾಲಕ ಶ್ರೀನಾಥ್ ಆಲೆಟ್ಟಿಯವರು ಈ ಸಂದರ್ಭದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವುದರ ಬಗ್ಗೆ ಶಿಕ್ಷಣ ಸಚಿವರಿಗೆ ಟ್ವಿಟ್ಟರ್ ಮೂಲಕ ಮನವಿಯೊಂದನ್ನು ಸಲ್ಲಿಸಿದ್ದಾರೆ.

ಮನವಿ ಹೀಗಿದೆ:
ವಿಶ್ವದಲ್ಲೇ ಎಲ್ಲರನ್ನೂ ನಿಬ್ಬೆರಗಾಗಿಸಿದ ಕೊರೋನಾ ಎಂಬ ಮಹಾಮಾರಿ ಖಾಯಿಲೆಯಿಂದಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಕಂಗಾಲಾಗಿದೆ. ಅಲ್ಲದೇ ಜನಸಾಮಾನ್ಯರಿಗೆ ತುಂಬಾ ತೊಂದರೆಗಳಾಗಿದ್ದು ನಮ್ಮನ್ನು ನಾವೇ ರಕ್ಷಿಸಿಕೊಳ್ಳಲಾಗದಂತಹ ಪರಿಸ್ಥಿತಿ ಎದುರಾಗಿದೆ. ಹೀಗಿರುವಲ್ಲಿ ನಮ್ಮ ಸರಕಾರ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಗೊಳಿಸಲು ಸಜ್ಜಾಗಿರುವುದು ತುಂಬಾ ಖೇದಕರದ ವಿಷಯವಾಗಿದೆ. ಅದರಲ್ಲೂ ಶಾಲೆ ಆರಂಭವಾಗುವ ಮುನ್ನ ಶಾಲೆಗಳ ಷರತ್ತುಗಳು ಕೆಲವು ಸುತ್ತೋಲೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ನೋಡಿ ನಮಗೇ ದಂಗಾಗುತ್ತದೆ. ಜನ ಸಾಮಾನ್ಯರೇ ಸರಕಾರದ ಕೆಲವು ನಿಭಂದನೆಗಳನ್ನು ಪಾಲಿಸುತ್ತಿಲ್ಲ ಇನ್ನು ಏನೂ ಅರಿಯದ ಮುಗ್ಧ ಮಕ್ಕಳು ಸರಕಾರದ ನಿಯಮವನ್ನು ಪಾಲಿಸುವರೇ? ಅಥವಾ ಮಾಸ್ಕ್ ಧರಿಸಿ ಈ ಪುಟ್ಟ ಮಕ್ಕಳು ತರಗತಿಯಲ್ಲಿ ಕುಳಿತುಕೊಳ್ಳುವರೇ? ಒಂದು ವೇಳೆ ಆ ಪುಟ್ಟ ಮಕ್ಕಳು ಮಾಸ್ಕ್ ಧರಿಸಿ ತರಗತಿಗೆ ಬಂದರೆ ಅವರ ಮಾಸ್ಕ್ ಅವರ ಮುಖದಲ್ಲಿ ಇರಬಹುದೇ? ಇದಲ್ಲದೇ ವಸತಿ ಶಾಲೆಗಳಲ್ಲಿ ಮಕ್ಕಳ ಪರಿಸ್ಥಿತಿ ಏನಾಗಬಹುದು? ಹಾಗೂ ಇದೀಗ ಕೆಲವು ಮಕ್ಕಳು ಸೀಲ್ಡೌನ್ ಒಳಗಾಗಿದ್ದ ಪ್ರದೇಶದಲ್ಲಿ ಕೂಡ ಬಂಧಿಯಾಗಿದ್ದು ಅಂತಹಾ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಿಲ್ಲವೇ? ಇಂತಹ ಪರಿಸ್ಥಿತಿಯಲ್ಲಿ ನಿರ್ಭೀತಿಯಿಂದ ಪೋಷಕರು ತನ್ನ ಮಕ್ಕಳನ್ನು ಶಾಲೆಗಳಿಗೆ ಕಲುಹಿಸಲು ಸಾಧ್ಯವಾಗುವುದೇ?
ಇದನ್ನೆಲ್ಲ ಗಮನಹರಿಸಿ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಈ ಖಾಯಿಲೆಗೆ ಲಸಿಕೆಯ ವ್ಯವಸ್ಥೆಯಾಗದೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ತೆರೆದಲ್ಲಿ ದೊಡ್ಡ ಅನಾಹುತಕ್ಕೆ ನಾಂದಿಯಾಗಬಹುದು. ಆದ್ದರಿಂದ ಸರಕಾರವು ಒಂದು ವರ್ಷ ಶೈಕ್ಷಣಿಕ ಅವದಿಯು ಮುಂದೆ ಹೋದರೂ ಚಿಂತೆ ಮಾಡದೇ ಶೈಕ್ಷಣಿಕ ವರ್ಷವನ್ನು ಮುಂದೂಡುವುದು ಒಳಿತು ಎಂಬುದು ನನ್ನ ಅನಿಸಿಕೆ.
ಶ್ರೀನಾಥ್ ಆಲೆಟ್ಟಿ
ಸ್ಪೀಡ್ ಕಂಪ್ಯೂಟರ್ಸ್, ಸುಳ್ಯ

Sponsors

Related Articles

Back to top button